ಮಂಗಳೂರು: ಶಾಲಾ-ವಿದ್ಯಾರ್ಥಿಗಳಿಗೆ ಶಾಸಕರೇ ಮುಂದೆ ನಿಂತು ರೈಫಲ್ ತರಬೇತಿ ನೀಡಿರುವುದು ರಾಜ್ಯ ಸರ್ಕಾರದ ತಾಲಿಬಾನ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾನ್ಯತೆಯಿರುವ ಎನ್ ಸಿಸಿಯಲ್ಲೂ ರೈಫಲ್ ತರಬೇತಿ ಕೊಡಲಾಗುತ್ತದೆ. ಅದರಲ್ಲಿ ದೇಶಪ್ರೇಮದ ಉದ್ದೇಶವಿದೆ. ಯಾರಿಗೆ ಬೇಕಾದರೂ ರೈಫಲ್ ತರಬೇತಿ ಕೊಡಬಹುದೇ?. ಈ ತರಬೇತಿಗೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯ ಅನುಮತಿ ಇದೆಯೇ?. ಈ ಬಗ್ಗೆ ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಮತ ನೀಡಿದವರ ಕೆಲಸ ಮಾಡಲಿ:ಮುಸ್ಲಿಂ ಮತ ಬೇಡ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ಪರಿಪಕ್ವವಲ್ಲದ ಇಂತಹ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಚೀಪ್ ಪಾಲಿಟಿಕ್ಸ್. ಬೆಳ್ತಂಗಡಿಯ ಜನತೆಯೇ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಖಾದರ್ ಹೇಳಿದರು.