ಸುಬ್ರಹ್ಮಣ್ಯ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆ ನಡೆಯುವುದಿಲ್ಲ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.
ಕೇವಲ ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು ಆದಿತ್ಯವಾರ ವಾರಾಂತ್ಯದ ದಿನಗಳಲ್ಲಿ ಶ್ರೀ ದೇವರ ದರುಶನಕ್ಕೆ ಕೂಡ ಅವಕಾಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಆಗಸ್ಟ್30ರ ತನಕ ಸೇವೆಗಳಿಗೆ ನಿರ್ಬಂಧ ದ.ಕ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣ ಅಧಿಕವಾಗಿರುವುದರಿಂದ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಆದೇಶ ಹೊರಡಿಸಲಾಗಿದೆ. ಆಗಸ್ಟ್ 30ರವರೆಗೆ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಚವಲ, ಪಂಚಾಮೃತ ಮಹಾಭಿಷೇಕ, ಪ್ರಾರ್ಥನೆ ಸೇರಿದಂತೆ ಯಾವುದೇ ಸೇವೆಗಳು ನಡೆಯುವುದಿಲ್ಲ.
ಬೆಳಗ್ಗೆ 7:00ರಿಂದ ಮಧ್ಯಾಹ್ನ 11:30ರ ತನಕ, ಮಧ್ಯಾಹ್ನ 12:15-1:30 ಹಾಗೂ 2:30ರಿಂದ ರಿಂದ ಸಂಜೆ 7:00ರ ತನಕ ಭಕ್ತರು ಶ್ರೀದೇವರ ದರುಶನ ಮಾಡಬಹುದು. ಅಲ್ಲದೆ ಈ ಸಂದರ್ಭ ಮಂಗಳಾರತಿ ಸೇವೆ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಾರಾಂತ್ಯ ದಿನಗಳನ್ನು ಹೊರತು ಪಡಿಸಿ ಇತರ ದಿನಗಳಲ್ಲಿ ವಸತಿ ಗೃಹದಲ್ಲಿ ತಂಗಲು ಅವಕಾಶವಿದೆ. ತಂಗುವ ಭಕ್ತರು 72 ಗಂಟೆಯೊಳಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹಾಜರುಪಡಿಸಬೇಕು ಎಂಬುದಾಗಿ ತಿಳಿಸಲಾಗಿದೆ.