ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಇಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡಿನ ಮೀನುಗಾರಿಕಾ ದೋಣಿಯನ್ನು ಕರಾವಳಿಯ ರಕ್ಷಣಾ ಪಡೆ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ನವ ಮಂಗಳೂರು ಬಂದರಿನ ತೀರದಿಂದ 36 ನಾಟಿಕಲ್ ಮೈಲ್ ದೂರದಲ್ಲಿ 'ತಿರುಚೆಂಡೂ ಮುರುಗನ್' ಎಂಬ ಮೀನುಗಾರಿಕಾ ದೋಣಿ ಸೆ. 24ರಂದು ಅಪಾಯಕ್ಕೆ ಸಿಲುಕಿ ಕೊಂಡಿತ್ತು. ಈ ಬಗ್ಗೆ ಮುಂಬೈನ ಸಾಗರ ರಕ್ಷಣೆ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) ಮಾಹಿತಿ ಬಂದಿತ್ತು.
ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕೇಂದ್ರ ಕಚೇರಿಗೆ ಎಂಆರ್‌ಸಿಸಿಯು ಮಂಗಳವಾರ ಮಾಹಿತಿ ರವಾನಿಸಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಕರಾವಳಿ ರಕ್ಷಣಾ ಪಡೆ ತಕ್ಷಣವೇ, ದೋಣಿಯನ್ನು ಎಳೆದು ತರುವ ಅಗತ್ಯ ಸಲಕರಣೆಗಳಿಂದ ಸನ್ನದ್ಧವಾಗಿದ್ದ ಸಿ- 448 ಹಾಗೂ ಸಿ- 446 ಇಂಟರ್‌ಸೆಪ್ಟರ್ ನೌಕೆಗಳನ್ನು ನೆರವಿಗೆ ಕಳುಹಿಸಿಕೊಟ್ಟಿದೆ.