ಮಂಗಳೂರು:ದೇಶದೆಲ್ಲೆಡೆ ಕೋವಿಡ್ ವೇಗವಾಗಿ ಹರಡುತ್ತಿದ್ದು, ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಇರುವುದರಿಂದ ಅವರ ಆರೈಕೆ ಮಾಡಲು ಕೆಲವೆಡೆ ನರ್ಸ್ಗಳ ಕೊರತೆ ಕಾಣಿಸಿದೆ. ಹೌದು, ಹಲವೆಡೆ ಬೆಡ್, ಆಕ್ಸಿಜನ್, ವೆಂಟಿಲೇಟರ್.. ಹೀಗೆ ಹಲವು ಕೊರತೆಗಳ ನಡುವೆ ವೈದ್ಯಕೀಯ ಸಿಬ್ಬಂದಿ ಕೊರತೆಯೂ ಇದೆ. ರೋಗಿಗಳ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ವೈದ್ಯರು, ನರ್ಸ್, ಸಿಬ್ಬಂದಿಗೆ ಸೋಂಕು ತಗುಲಿರುವುದೂ ಕೂಡ ಒಂದು ಕಾರಣ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರ್ಸ್ಗಳ ಕೊರತೆಯಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೋವಿಡ್ ಪರಿಣಾಮ ಆಸ್ಪತ್ರೆಗಳಲ್ಲಿ ನರ್ಸ್ಗಳಿಗೆ ಬಿಡುವಿಲ್ಲದ ಕೆಲಸವಿದೆ. ಒತ್ತಡವೂ ಹೆಚ್ಚಾಗಿದೆ. ರೋಗಿಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ನರ್ಸ್ಗಳ ಕೊರತೆ ಕೆಲವೆಡೆ ಕಾಣಿಸಿಕೊಳ್ಳುತ್ತಿದೆ. ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೊರತೆ ಎದುರಾಗಿಲ್ಲವಾದರೂ ಸರ್ಕಾರಿ ಆಸ್ಪತ್ರೆಗೆ ಮತ್ತಷ್ಟು ನರ್ಸ್ಗಳ ಅವಶ್ಯಕತೆ ಇರುವುದರಿಂದ ನೇಮಕ ಪ್ರಕ್ರಿಯೆ ನಡೆಯುತ್ತಿದೆ.