ಮಂಗಳೂರು:ಕೊರೊನಾ ನೆಪವೊಡ್ಡಿ ಈ ಬಾರಿ ದಸರಾ ಸಂದರ್ಭ ಹುಲಿ ವೇಷ ಕುಣಿತಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಆದರೆ ಕನಿಷ್ಠ ಪಕ್ಷ ಸಾಂಕೇತಿಕವಾಗಿಯಾದರೂ ಹುಲಿವೇಷ ಕುಣಿತಕ್ಕೆ ಅವಕಾಶ ನೀಡಬೇಕೆಂಬ ಆಗ್ರಹ ಹುಲಿವೇಷ ಕುಣಿತ ಪ್ರಿಯರಿಂದ ಕೇಳಿ ಬರುತ್ತಿದೆ.
ದಸರಾ ಎಂದಾಗ ಕರಾವಳಿ ಭಾಗದಲ್ಲಿ ಮೊದಲು ನೆನಪಾಗುವುದೇ ಹುಲಿವೇಷ. ಇಲ್ಲಿ ಹುಲಿವೇಷ ತನ್ನದೇ ವೈಶಿಷ್ಟ್ಯ ಹೊಂದಿದ್ದು, ಇದಕ್ಕೆ ಧಾರ್ಮಿಕ ಹಿನ್ನೆಲೆಯೂ ಇದೆ. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದ ಹುಲಿವೇಷ ಕುಣಿತಕ್ಕೆ ಅವಕಾಶ ನೀಡದಿರಲು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಧಾರ್ಮಿಕ ಪರಿಷತ್ನ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಿಂದ ಕರಾವಳಿಯ ಜನತೆಗೆ ನಿರಾಸೆಯಾಗಿದ್ದು, ದಸರಾ ಎಂದರೆ ಹುಲಿವೇಷ ಕುಣಿತಕ್ಕೆ ಮೊದಲ ಪ್ರಾಶಸ್ತ್ಯ. ಅದೇ ಇಲ್ಲದಿದ್ದಲ್ಲಿ ದಸರಾ ಸಪ್ಪೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ದಸರಾ ಹಬ್ಬದಲ್ಲಿ ಹುಲಿವೇಷ ಕುಣಿತಕ್ಕೆ ಅವಕಾಶ ನೀಡಲು ಹುಲಿವೇಷ ಕುಣಿತ ಪ್ರಿಯರಿಂದ ಮನವಿ. ಈ ಬಗ್ಗೆ ಮಂಗಳಾದೇವಿ ಶೋಭಾಯಾತ್ರೆ ಸಮಿತಿಯ ಅಧ್ಯಕ್ಷ ದಿಲ್ರಾಜ್ ಆಳ್ವ ಮಾತನಾಡಿ, ಕೊರೊನಾ ಸೋಂಕಿನ ಭೀತಿಯಿಂದ ದ.ಕ. ಜಿಲ್ಲಾಧಿಕಾರಿಯವರು ದಸರಾ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಹುಲಿವೇಷ ಹಾಗೂ ಟ್ಯಾಬ್ಲೋಗಳಿಗೆ ಅನುಮತಿ ನಿರಾಕರಿಸಿದ್ದಾರೆ. ಈಗಾಗಲೇ ನಾವು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಕರಾವಳಿಯಲ್ಲಿನ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಹುಲಿವೇಷದ ಮಹತ್ವವನ್ನು ಮನದಟ್ಟು ಮಾಡಿದ್ದೇವೆ. ಈ ಬಗ್ಗೆ ಮತ್ತೆ ಅ.13 ರಂದು ಸಭೆ ಕರೆದು ತೀರ್ಮಾನ ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ.
ಆದ್ದರಿಂದ ನಮ್ಮ ಮನವಿ ಏನೆಂದರೆ ದಸರಾ ಉತ್ಸವ ನಿಮಿತ್ತ ಮಂಗಳಾದೇವಿ ದೇವಸ್ಥಾನ ಹಾಗೂ ಮಾರಿಯಮ್ಮ ದೇವಸ್ಥಾನದ ರಥೋತ್ಸವದ ಸಂದರ್ಭ ಹುಲಿವೇಷ ಕುಣಿತದಲ್ಲಿ ಪಾಲ್ಗೊಳ್ಳಲು ನಮ್ಮ ಹತ್ತು ತಂಡಗಳಿವೆ. ಈ ತಂಡಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ ಹತ್ತು ಜನರ ಒಂದು ತಂಡಕ್ಕೆ ಹುಲಿವೇಷ ಧರಿಸಿ ದೇವಿಯ ಶೋಭಾಯಾತ್ರೆ ಸಂದರ್ಭದಲ್ಲಿ ಕುಣಿಯಲು ಅವಕಾಶ ನೀಡಬೇಕು. ಅದೇ ರೀತಿ ದ.ಕ.ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲ ಶಾಸಕರಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಹುಲಿವೇಷ ಪ್ರೇಮಿಯಾದ ನಿಶಾದ್ ಎಮ್ಮೆ ಕೆರೆ ಮಾತನಾಡಿ, ಹುಲಿವೇಷ ಇಲ್ಲದ ದಸರಾವನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಹುಲಿವೇಷ ಕುಣಿತಕ್ಕೆ ಅವಕಾಶ ನೀಡದಿದ್ದಲ್ಲಿ ಎಲ್ಲರಿಗೂ ನಿರಾಶೆಯಾಗೋದು ಖಂಡಿತ. ಸರ್ಕಾರದ ನಿಯಮವನ್ನು ಪಾಲಿಸಿ ನಾವು ಹುಲಿವೇಷ ಕುಣಿಯಲಿದ್ದೇವೆ. ಆದ್ದರಿಂದ ಜಿಲ್ಲಾಡಳಿತ ಹುಲಿವೇಷಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.