ಬಂಟ್ವಾಳ:ತಾಲೂಕಿನ ವಿಟ್ಲದ ಮುಖ್ಯ ರಸ್ತೆಯ ಡಾಂಬರೀಕರಣ ವೇಳೆ ಕಾರೊಂದು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿರುವುದರಿಂದ ಅಷ್ಟು ಜಾಗವನ್ನು ಬಿಟ್ಟು ಡಾಂಬರೀಕರಣ ಮಾಡಿದ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈಗ ಕಾರು ತೆರವಾದ ಬಳಿಕ ಬಾಕಿ ಉಳಿದ ಸ್ಥಳಕ್ಕೆ ಡಾಂಬರೀಕರಣ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ.
ವಿಟ್ಲದ ಶಾಲಾ ರಸ್ತೆಯಿಂದ ಮೇಗಿನಪೇಟೆ ವರೆಗೆ ರಸ್ತೆ ಡಾಂಬರೀಕರಣ ನಡೆಯುತ್ತಿದೆ. ವಿಟ್ಲದ ಎಲಿಮೆಂಟರಿ ಶಾಲೆಯ ಮುಂಭಾಗ ಕಾರೊಂದು ಪಾರ್ಕ್ ಮಾಡಿದ್ದರಿಂದ ಆ ಸ್ಥಳದಲ್ಲಿ ಡಾಂಬರೀಕರಣ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಕಾರು ನಿಂತಿದ್ದ ಸ್ಥಳ ಬಿಟ್ಟು ಅದರ ಹೊರ ಭಾಗದಲ್ಲಿ ಡಾಂಬರೀಕರಣ ಮಾಡಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ವಿವಾದ ಉಂಟು ಮಾಡಿತ್ತು.