ಬೆಳ್ತಂಗಡಿ:ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿರುವ ತರಕಾರಿ, ದಿನಸಿ ಮತ್ತು ಬ್ಯಾಂಕ್ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಾಡಿಗೆದಾರರ ಏಪ್ರಿಲ್ ತಿಂಗಳ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದು ಗುರುನಾರಾಯಣ ಸೇವಾ ಸಂಘದ ಉಪಾಧ್ಯಕ್ಷ ಹಾಗೂ ವಕೀಲ ಮನೋಹರ್ ಕುಮಾರ್ ಇಳಂತಿಲ ಹೇಳಿದರು.
ಪಟ್ಟಣದಲ್ಲಿ ಮಾತನಾಡಿದ ಅವರು, ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಬಾಡಿಗೆದಾರರಿಗೆ ಏಪ್ರಿಲ್ ತಿಂಗಳ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಮೇ, ಜೂನ್, ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಅರ್ಧ ಬಾಡಿಗೆ ನೀಡುವಂತೆ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಬಾಡಿಗೆದಾರರಿಗೆ ಒಟ್ಟು 6,71,115 ರೂ. ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.
ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದಿಂದ ಬಾಡಿಗೆ ಮನ್ನಾ ಸಂಘದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ನಿಗದಿಗೊಂಡಿದ್ದ 16 ಮದುವೆಗಳು ಕೂಡಾ ರದ್ದುಗೊಂಡಿದ್ದು, ಮುಂಗಡವಾಗಿ ಪಡೆದುಕೊಂಡಿದ್ದ 80 ಸಾವಿರ ರೂ. ಹಿಂದಿರುಗಿಸಲಾಗಿದೆ. ನಿಗದಿಯಾಗಿದ್ದ ಮದುವೆ ರದ್ದುಗೊಂಡಿದ್ದರಿಂದ ಸಂಘಕ್ಕೆ 6 ಲಕ್ಷದ 30 ಸಾವಿರ ರೂ. ನಷ್ಟ ಉಂಟಾಗಿದೆ. ಆದರೂ, ಜನರ ಸಂಕಷ್ಟಕ್ಕೆ ಸ್ಪಂದಿಸುವ ನೆಲೆಯಲ್ಲಿ ಮುಂಗಡ ಪಾವತಿಸಿದ ಹಣವನ್ನೂ ಕೂಡ ಹಿಂದಿರುಗಿಸಿದ್ದೇವೆ ಎಂದರು.
ಈಗಾಗಲೇ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ರಕ್ಷಾ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳಿಗೆ 50 ಸಾವಿರದ ರೂ. ಖರ್ಚು ಮಾಡಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿದೆ. ತಾಲೂಕಿನ ಅರ್ಹ ಸಮಾಜ ಬಾಂಧವರಿಗೆ 7.50 ಲಕ್ಷ ರೂ. ವೆಚ್ಚದ ಕಿಟ್ ವಿತರಿಸಲಾಗಿದೆ. ಈ ಮೂಲಕ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ನಾರಾಯಣ ಸುವರ್ಣ, ಕೋಶಾಧಿಕಾರಿ ಚಿದಾನಂದ ಎಲ್ದಕ್ಕ, ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ರೂಪೇಶ್ ಧರ್ಮಸ್ಥಳ ಇದ್ದರು.