ಮಂಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರ ಕುರಿತ ವಿಚಾರ ಇದೀಗ ಮತ್ತೆ ಜೀವತಾಳಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರೇಟ್ ಆರಂಭವಾದ ಬಳಿಕ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಈ ಹಿಂದೆಯೇ ಚರ್ಚೆ ನಡೆದಿತ್ತು. ಆದರೆ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಂಗಳೂರು ಬಿಟ್ಟು ಪುತ್ತೂರಿಗೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆ ಮಾತ್ರ ಮೀನಮೇಷ ಎಣಿಸುತ್ತಿತ್ತು. ಸದ್ಯ ಪುತ್ತೂರು ಶಾಸಕ ಸಂಜೀವ ಮಠಂದೂರು ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಬಹುಕಾಲದ ನಿರೀಕ್ಷೆ ಇದೀಗ ಮತ್ತೆ ಗರಿಗೆದರತೊಡಗಿದೆ
ಮಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ಆರಂಭಗೊಂಡ ನಂತರ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪುತ್ತೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯ ನಿರ್ವಹಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಮಂಗಳೂರು, ಬಂಟ್ವಾಳ, ಮೂಡಬಿದಿರೆ, ಉಳ್ಳಾಲ ವಲಯಗಳನ್ನು ಸೇರಿಸಿ ಕರಾವಳಿ ಪ್ರದೇಶಗಳು ಹಾಗೂ ಪುತ್ತೂರು, ಸುಳ್ಯ, ಬೆಳ್ತಂಗಡಿ ಪ್ರದೇಶಗಳನ್ನು ಸೇರಿಸಿ ಮಲೆನಾಡು ಎಂದು ಗುರುತಿಸಲಾಗಿದೆ. ಕರಾವಳಿ ಭಾಗಗಳನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಗೂ, ಮಲೆನಾಡು ಭಾಗಗಳನ್ನು ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೂ ತರಲು ಚಿಂತನೆ ನಡೆಸಲಾಗಿತ್ತು.
ಮತ್ತೆ ಜೀವತಾಳಿದ ದ.ಕ ಎಸ್ಪಿ ಕಚೇರಿ ಸ್ಥಳಾಂತರ ವಿಚಾರ ಆದರೆ, ಮಂಗಳೂರು ಪೊಲೀಸ್ ಕಮಿಷನರೇಟ್ ಆರಂಭಗೊಂಡು 10 ವರ್ಷ ಸಮೀಪಿಸುತ್ತಿದ್ದು, ಎಸ್ಪಿ ಕಚೇರಿ ಮಾತ್ರ ಮಂಗಳೂರನ್ನೇ ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದೆ. ಇದರಿಂದಾಗಿ ಮಲೆನಾಡು ಭಾಗದ ಎಲ್ಲ ಸಮಸ್ಯೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಾಗಿ ಮಂಗಳೂರಿಗೆ ಹೋಗಬೇಕಾದ ಪರಿಸ್ಥಿತಿಯೂ ಇದೆ.
ಇದೀಗ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸರ್ಕಾರಕ್ಕೆ ಒತ್ತಡ ಹೇರಲಾರಂಭಿಸಿದ್ದಾರೆ. ಎಸ್ಪಿ ಕಚೇರಿ ಜೊತೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯೂ ಪುತ್ತೂರಿಗೆ ಲಭ್ಯವಾಗಲಿದ್ದು, ಇದರಿಂದ ಈ ಭಾಗದ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರೆಯಲಿದೆ.
ಪುತ್ತೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಯಾವ ಕಾರಣಕ್ಕಾಗಿ ಅತೀ ಅಗತ್ಯವಿದೆ ಎನ್ನುವುದು ಇದೀಗ ಇಲ್ಲಿ ಅತ್ಯಂತ ಮುಖ್ಯವಾದ ವಿಚಾರವಾಗುತ್ತಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಬಂಟ್ವಾಳದ ಪರಂಗಿಪೇಟೆಗೆ ಮುಕ್ತಾಯಗೊಂಡರೆ ಅದಾದ ಬಳಿಕದ ಎಲ್ಲ ಪ್ರದೇಶಗಳು ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಗೆ ಬರುತ್ತದೆ. ಒಂದು ಕಡೆಯಿಂದ ಚಿಕ್ಕಮಗಳೂರು ಗಡಿಯ ಚಾರ್ಮಾಡಿ ಘಾಟ್, ಇನ್ನೊಂದು ಕಡೆ ಕೊಡಗು ಗಡಿಯ ಸಂಪಾಜೆ ಘಾಟ್, ಈಶ್ವರಮಂಗಲ, ಜಾಲ್ಸೂರು, ಸುಳ್ಯಪದವು ಪ್ರದೇಶದ ಕೇರಳ ಗಡಿಗಳು ಎಸ್ಪಿ ಕಚೇರಿ ವ್ಯಾಪ್ತಿಗೆ ಬರುತ್ತದೆ. ಈ ಎಲ್ಲ ಪ್ರದೇಶಗಳನ್ನು ಅವಲೋಕನ ಮಾಡಲು ಪುತ್ತೂರೇ ಸೂಕ್ತ ಕೇಂದ್ರ ಸ್ಥಾನವಾಗಿರುವುದರಿಂದ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು.
ಆದರೆ, ಈವರೆಗೂ ಈ ಪ್ರಕ್ರಿಯೆಗೆ ಚಾಲನೆ ದೊರೆತಿರಲಿಲ್ಲ. ಇದೀಗ ಪುತ್ತೂರು ಶಾಸಕ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರುರುತ್ತಿದ್ದಾರೆ. ಈ ಸಂಬಂಧ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಕೂಡಾ ನಡೆಸಲಾಗಿದೆ. ಅಲ್ಲದೇ ಪುತ್ತೂರಿನಲ್ಲಿ ಈ ಎಸ್ಪಿ ಕಚೇರಿಗೆ ಜಾಗವನ್ನು ಸಹ ಕಾಯ್ದಿರಿಸಲಾಗಿದ್ದು, ಎಸ್ಪಿ ಕಚೇರಿ ಶೀಘ್ರವೇ ಪುತ್ತೂರಿಗೆ ಬರುವ ಎಲ್ಲ ಸಾಧ್ಯತೆಗಳೂ ಹೆಚ್ಚಾಗಿವೆ.