ಕರ್ನಾಟಕ

karnataka

ETV Bharat / state

ವೆನ್ಲಾಕ್​ ಕೋವಿಡ್ ಆಸ್ಪತ್ರೆ ಬಳಿ ರಿಕ್ಷಾ ನಿಲ್ದಾಣದಲ್ಲೇ ಆಶ್ರಯ ಪಡೆದ ನಿರಾಶ್ರಿತರು!

ವೆನ್ಲಾಕ್ ಕೋವಿಡ್ ಆಸ್ಪತ್ರೆ ಬಳಿಯ ಆಟೋ ರಿಕ್ಷಾ ನಿಲ್ದಾಣವನ್ನೇ ವಸತಿ ಮಾಡಿಕೊಂಡು ನಿರಾಶ್ರಿತರು ಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.

Wenlock Covid Hospital
ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಬಳಿ ರಿಕ್ಷಾಸ್ಟ್ಯಾಂಡನ್ನು‌‌ ಆಶ್ರಯಿಸಿದ ನಿರಾಶ್ರಿತರು...! ಅನಾಹುತಕ್ಕೆ ಆಹ್ವಾನ

By

Published : Apr 21, 2020, 7:54 PM IST

ಮಂಗಳೂರು:ಲಾಕ್​ಡೌನ್ ಬಳಿಕ ನಿರಾಶ್ರಿತರಿಗೆ, ಅತಂತ್ರರಾಗಿರುವ ಹೊರ ರಾಜ್ಯ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ಆದರೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಬಳಿಯ ಆಟೋ ರಿಕ್ಷಾ ನಿಲ್ದಾಣವನ್ನೇ ವಸತಿ ಮಾಡಿಕೊಂಡಿರುವ ಕೆಲ ನಿರಾಶ್ರಿತರು ಇನ್ನೂ ಕಾಣಸಿಗುತ್ತಿದ್ದಾರೆ.

ಇವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜಾಗೃತಿಯೂ ಇಲ್ಲ. ಮಾಸ್ಕ್, ಸ್ಯಾನಿಟೈಸರ್, ಶುಚಿತ್ವದ ಬಗ್ಗೆ ಅರಿವೂ ಇಲ್ಲ. ಓರ್ವ ಸ್ಥಳೀಯರು, ಉತ್ತರ ಪ್ರದೇಶ, ದಿಲ್ಲಿ ಮೂಲದ ಇಬ್ಬರು ಕೂಲಿ ಕಾರ್ಮಿಕರು ಮತ್ತು ಸುಬ್ರಹ್ಮಣ್ಯದ ಓರ್ವ ಮಹಿಳೆ ಸೇರಿ ನಾಲ್ಕೈದು ಮಂದಿ ನಿರಾಶ್ರಿತರು ಇಲ್ಲಿದ್ದಾರೆ.

ಅಲ್ಲಿಯೇ ಗೋಣಿ ಚೀಲ ಹಾಸಿಕೊಂಡು ಮಲಗುವ ಇವರಿಗೆ ಮೂರು ಹೊತ್ತಿಗೂ ಊಟವನ್ನು ಯಾರೋ ತಂದು ಕೊಡುತ್ತಿದ್ದಾರೆ. ಸುಲಭ ಶೌಚಾಲಯಕ್ಕೆ ಹೋಗಿ ಐದು ರೂ. ಕೊಟ್ಟು ಸ್ನಾನ ಮಾಡುತ್ತಾರೆ‌. ಅಲ್ಲಿ ಇಲ್ಲಿ ಸುತ್ತಾಡುತ್ತಾರೆ. ಮತ್ತೆ ಅದೇ ರಿಕ್ಷಾ ನಿಲ್ದಾಣವನ್ನ ಆಶ್ರಯಿಸುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯ ನಿರಾಶ್ರಿತ ಸುನೀಲ್ ಮಾತನಾಡಿ, ನನಗೆ ಮನೆಯವರು ಯಾರೂ ಇಲ್ಲ. ಹಿಂದೆ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲಿಗೆ ಏಟಾಗಿದೆ. ಹಾಗಾಗಿ ಇಲ್ಲಿ ಇದ್ದೇನೆ‌. ಮೂರು ಹೊತ್ತಿಗೂ ಊಟವನ್ನು ಯಾರೋ ತಂದು ಕೊಡುತ್ತಿದ್ದಾರೆ. ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರಕ್ಕೆ ಹಾಕಿದ್ದಲ್ಲಿ ಹೋಗುತ್ತೇನೆ ಎಂದು ಹೇಳುತ್ತಾನೆ.

ಕುಕ್ಕೆ ಸುಬ್ರಹ್ಮಣ್ಯದ ಶಾರಾದ ಎಂಬ ಮಹಿಳೆಯ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಇದೆ. ಆಕೆಗೆ ಸುಬ್ರಹ್ಮಣ್ಯದಲ್ಲಿ ಹೆತ್ತವರು, ತಮ್ಮ ಇದ್ದಾರೆ. ಈಕೆಯೂ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದಳು. ಆದರೆ ಕಾಲಿಗೆ ಏಟಾಗಿರೋದರಿಂದ ವೆನ್ಲಾಕ್ ಆಸ್ಪತ್ರೆಗೆ ಬಂದ ಸಂದರ್ಭ ಅದು ಕೋವಿಡ್ ಆಸ್ಪತ್ರೆಯಾಗಿ ಬದಲಾಗಿತ್ತು. ಬಳಿಕ ಎಲ್ಲೂ ಹೋಗಲು ಆಗದೆ ಇದೇ ರಿಕ್ಷಾ ನಿಲ್ದಾಣವನ್ನೇ ಆಶ್ರಯಿಸಿದ್ದಾರೆ. ಇನ್ನು ಉಳಿದವರ ಪರಿಸ್ಥಿತಿ ಹೆಚ್ಚುಕಮ್ಮಿ ಇದೇ ಆಗಿದೆ.

ಆದರೆ ಜಿಲ್ಲಾಡಳಿತ ಇವರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ, ಪುರಭವನದಲ್ಲಿ ತಾತ್ಕಾಲಿಕವಾಗಿ ತೆರೆದ ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಿದ್ದರೂ ಇವರು ತೆರಳಲು ತಯಾರಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಆದರೂ ಕೇವಲ ಕೂಗಳತೆ ದೂರದಲ್ಲಿ ಕೋವಿಡ್ ಆಸ್ಪತ್ರೆ ಇರೋದರಿಂದ ಅಲ್ಲಿಯೇ ಈ ನಿರಾಶ್ರಿತರು ಆವಾಸಸ್ಥಾನ ಮಾಡಿಕೊಂಡಿರೋದು ಅನಾಹುತವನ್ನು ಆಹ್ವಾನಿಸುವಂತೆ ಕಾಣುತ್ತಿದೆ. ಆದ್ದರಿಂದ ಜಿಲ್ಲಾಡಳಿತಕ್ಕೆ ಇವರನ್ನು ಸ್ಥಳಾಂತರ ಮಾಡುವ ಗುರುತರವಾದ ಹೊಣೆ ಇದೆ. ಆದಷ್ಟು ಶೀಘ್ರದಲ್ಲೇ ಪಾಲಿಕೆಯ ಅಧಿಕಾರಿಗಳು ಈ ನಿರಾಶ್ರಿತರಿಗೆ ಸೂಕ್ತ ನೆಲೆ ಒದಗಿಸಬೇಕಾಗಿದೆ.

ABOUT THE AUTHOR

...view details