ಮಂಗಳೂರು: ದ.ಕ ಜಿಲ್ಲೆಯಲ್ಲಿ ವರ್ಷಧಾರೆ ಜೋರಾಗಿದ್ದು, ನಾಳೆ, ನಾಡಿದ್ದು ಭಾರೀ ಮಳೆಯಾಗುವು ಸಂಭವ ಇದೆ. ಹೀಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಕುರಿತು ಜಿಲ್ಲಾಧಿಕಾರಿಯಿಂದ ಸುದ್ದಿಗೋಷ್ಠಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದ್ದು ಜನರು ಎಚ್ಚರಿಕೆಯಿಂದ ಇರಬೇಕು. ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಪರಿಸ್ಥಿತಿ ನೋಡಿ ಸಂಜೆ ವೇಳೆಗೆ ಘೋಷಣೆ ಮಾಡಲಾಗುವುದು ಎಂದರು.
ಭಾರಿ ಮಳೆ ಸುರಿಯುತ್ತಿರುವುದರಿಂದ ನೇತ್ರಾವತಿ, ಗುರುಪುರ ನದಿ ತುಂಬಿ ಹರಿಯುತ್ತಿದೆ. ಗುಡ್ಡ ಕುಸಿತ, ನೆರೆ ಬರುವಂತಹ ಸಂಭವ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಲು ಅಧಿಕಾರಿಗಳು ಸೂಚಿಸಿದರೆ ಅದನ್ನು ಜನರು ಪಾಲನೆ ಮಾಡಬೇಕು ಎಂದು ಹೇಳಿದರು.
ಚಾರ್ಮಾಡಿ ಘಾಟಿಯಲ್ಲಿ ಸಣ್ಣ ಮಟ್ಟದ ಗುಡ್ಡ ಕುಸಿತ ಆಗಿದ್ದು ಇನ್ನೆರಡು ದಿನಗಳಲ್ಲಿ ಘಾಟಿಯಲ್ಲಿ ಗುಡ್ಡ ಕುಸಿತ ಜಾಸ್ತಿ ಆಗಬಹುದು. ಮಳೆ ಅನಾಹುತ ತಡೆಯಲು ದ.ಕ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ ಎಂದರು.
ಮೀನುಗಾರಿಕೆಗೆ ಎಚ್ಚರಿಕೆ:
ಭಾರಿ ಮಳೆ ಸುರಿಯುತ್ತಿರುವುದರಿಂದ ಸಮುದ್ರ ಪ್ರಕ್ಷುಬ್ಧವಾಗಿದೆ. ಆದ್ದರಿಂದ ಎರಡು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ ಎಂದರು.