ಮಂಗಳೂರು: ಪೊಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ಪಡೆಯುವ ಸಂದರ್ಭ ಮಹಿಳಾ ಪೊಲೀಸ್ ಅಧಿಕಾರಿಗಳು ಮರು ಪ್ರಶ್ನೆ ಕೇಳದೆ ಸಂತ್ರಸ್ತೆ ನೀಡುತ್ತಿರುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ಎಂದು ಪೊಲೀಸ್ ತರಬೇತಿದಾರರಾದ ರೋಹಿತ್ ಸಿ.ಜಿ. ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮಕ್ಕಳ ರಕ್ಷಣಾ ಕಾಯ್ದೆಗಳಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಕ್ಸೊ ಪ್ರಕರಣ ದೂರು ಬಂದ 24 ಗಂಟೆಗಳೊಳಗೆ ಪ್ರಥಮ ವರ್ತಮಾನ ವರದಿ ದಾಖಲು ಮಾಡುವ ಅಂಶಗಳ ಬಗ್ಗೆ, ಸಂತ್ರಸ್ತರ ಹೇಳಿಕೆ ಪಡೆಯುವ ಬಗ್ಗೆ, ಬಾಲ್ಯ ವಿವಾಹ, ಮಕ್ಕಳ ಮಾರಾಟ-ಸಾಗಾಟ, ಬಾಲಕಾರ್ಮಿಕ ಹಾಗೂ ಮಕ್ಕಳ ಭಿಕ್ಷಾಟನೆ, ತಡೆಗಟ್ಟುವಲ್ಲಿ ಪೊಲೀಸರ ಪಾತ್ರದ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಕ್ಸೊ ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿಯ ಪ್ರತಿಯನ್ನು ಕಡ್ಡಾಯವಾಗಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಳುಹಿಸಬೇಕು. ಪ್ರಥಮ ವರ್ತಮಾನ ದಾಖಲಾದ 24 ಗಂಟೆಯೊಳಗೆ ನ್ಯಾಯಾಲಯದಲ್ಲಿ 164 ಸ್ಟೇಟ್‍ಮೆಂಟ್ ದಾಖಲಿಸಿಕೊಳ್ಳಲು ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲು ವೈದ್ಯಾಧಿಕಾರಿಯವರಿಗೆ ಹೇಳಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾದ ಸಿಸ್ಟರ್ ದುಲ್ಸಿನ್ಸ್ ಮಾತನಾಡಿ, ವಿಶೇಷ ಮಕ್ಕಳ ಪೊಲೀಸ್ ಘಟಕ ಹಾಗೂ ಜೆ.ಜೆ. ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಸಣ್ಣಪುಟ್ಟ ಮತ್ತು ಗಂಭೀರ ಪ್ರಕರಣಗಳಲ್ಲಿ ಪ್ರಥಮ ವರ್ತಮಾನ ದಾಖಲಿಸುವ ಬದಲು ಜೆ.ಜೆ. ನಿಯಮದಲ್ಲಿ ತಿಳಿಸಿರುವ ನಮೂನೆ 01 ನ್ನು ಭರ್ತಿ ಮಾಡಿ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಇದನ್ನೂ ಓದಿ:ವಾಹನ ತಪಾಸಣೆಗೆ ಹೋದ RTO ಅಧಿಕಾರಿಗೆ ಅವಾಜ್ ಹಾಕಿದ ವ್ಯಕ್ತಿ: ವಿಡಿಯೋ ವೈರಲ್
ಘೋರ ಅಪರಾಧಗಳಲ್ಲಿ ಮಾತ್ರ ಪ್ರಥಮ ವರ್ತಮಾನ ವರದಿ ದಾಖಲು ಮಾಡಿ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕು. ಸಣ್ಣಪುಟ್ಟ ಮತ್ತು ಗಂಭೀರ ಅಪರಾಧಗಳನ್ನು ವಯಸ್ಕರ ಜೊತೆ ಸೇರಿ ಮಾಡಿದ್ದರೆ, ಅಂತಹ ಸಂದರ್ಭದಲ್ಲಿ ಈ ಪ್ರಕರಣಗಳಲ್ಲಿ ಜೆ.ಜೆ ಕಾಯ್ದೆಯ ಪ್ರಕಾರ ಪ್ರಥಮ ವರ್ತಮಾನ ವರದಿ ದಾಖಲಿಸಬಹುದೆಂದು ತಿಳಿಸಿದರು. ಪ್ರಕರಣದ ಅಂತಿಮ ವರದಿಯನ್ನು ಎರಡು ತಿಂಗಳ ಅವಧಿಯೊಳಗೆ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕು. ಜೆ.ಜೆ ಕಾಯ್ದೆಯಲ್ಲಿ ತಿಳಿಸಿರುವಂತೆ ಪ್ರತಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಯವರು ಇರಬೇಕು ಎಂದು ತಿಳಿಸಿದರು.
ತರಬೇತಿಯ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು, ಇಲಾಖಾಧಿಕಾರಿಗಳು, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ಘಟಕದ ಸಿಬ್ಬಂದಿಯೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.