ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳು ಒಂದರಲ್ಲೇ 1,78,314 ಪ್ರಯಾಣಿಕರು ಆಗಮನ ಹಾಗೂ ನಿರ್ಗಮಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಅತ್ಯಧಿಕವಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಇದರಲ್ಲಿ 1,32,762 ದೇಶೀಯ ಮತ್ತು 45,552 ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ನವೆಂಬರ್‌ನಲ್ಲಿ ಆಗಮಿಸಿದ ಹಾಗೂ ನಿರ್ಗಮಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ ಅಕ್ಟೋಬರ್ 2023 ರಲ್ಲಿ ನಿರ್ವಹಿಸಿದ ಪ್ರಯಾಣಿಕರಿಗಿಂತ 10.3% ಹೆಚ್ಚಾಗಿದೆ. ಇದರೊಂದಿಗೆ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎಂಟು ತಿಂಗಳಲ್ಲಿ ವಿಮಾನ ನಿಲ್ದಾಣವು 12,86,207 ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಕಳೆದ ವರ್ಷದ ಈ ಅವಧಿಯಲ್ಲಿ 11,95,499 ಪ್ರಯಾಣಿಕರನ್ನು ನಿರ್ವಹಿಸಲಾಗಿತ್ತು.
ಅಕ್ಟೋಬರ್ 29, 2023 ರಂದು ಪ್ರಾರಂಭವಾದ ಚಳಿಗಾಲದ ವೇಳಾಪಟ್ಟಿಯ ಪ್ರಾರಂಭದೊಂದಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಆರಂಭವಾಗಿತ್ತು. ಮಂಗಳೂರು-ಬೆಂಗಳೂರು, ಮಂಗಳೂರು-ಚೆನ್ನೈ ಮತ್ತು ಮಂಗಳೂರು-ಮುಂಬೈ ವಲಯಗಳಲ್ಲಿ ಹೆಚ್ಚುವರಿ ವಿಮಾನಗಳು ಸಹ ಪ್ರಯಾಣಿಕರ ಬೆಳವಣಿಗೆಯಲ್ಲಿ ಈ ಏರುತ್ತಿರುವ ಪ್ರವೃತ್ತಿಗೆ ನೆರವಾಗಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.