ಮಂಗಳೂರು(ದಕ್ಷಿಣಕನ್ನಡ):ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 298 ಮಂದಿಯ ಚಾಲನಾ ಪರವಾನಗಿ (ಡಿಎಲ್ )ರದ್ದು ಮಾಡುವಂತೆ ನಗರ ಪೊಲೀಸ್ ಕಮಿಷನರ್ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
ನಿರಂತರ ಸಂಚಾರ ನಿಯಮ ಉಲ್ಲಂಘನೆ, ಅಜಾಗರೂಕತೆ, ನಿರ್ಲಕ್ಷ್ಯದಿಂದ ಚಾಲನೆ ಆರೋಪದ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮಂಗಳೂರು ನಗರ ಪೊಲೀಸ್ ಇಲಾಖೆ ಮುಂದಾಗಿದೆ. ಸುಪ್ರೀಂ ಕೋರ್ಟ್ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ನಿತ್ಯ ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯಿದೆ-1988/2019ರಡಿ, ಆ. 6ರಿಂದ 20 ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರ ಅನುಜ್ಞಾ ಪತ್ರ (ಡಿಎಲ್)ಗಳನ್ನು ಅಮಾನತುಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಕಚೇರಿ ಪ್ರಕಟಣೆ ತಿಳಿಸಿದೆ.
298 ಪ್ರಕರಣಗಳ ವಿವರ:ಅತಿವೇಗ, ನಿರ್ಲಕ್ಷ್ಯದ ಚಾಲನೆ ಪ್ರಕರಣದಲ್ಲಿ 71 ಪ್ರಕರಣಗಳು ದಾಖಲಾದರೆ, ಮದ್ಯಸೇವಿಸಿ ಚಾಲನೆ 20 ಪ್ರಕರಣ, ಗೂಡ್ಸ್ ವಾಹನದಲ್ಲಿ ಪ್ರಯಾಣಿಕರ ಸಾಗಾಟ 42 ಪ್ರಕರಣ, ಚಾಲನೆ ವೇಳೆ ಮೊಬೈಲ್ ಬಳಕೆ 4 ಪ್ರಕರಣ, ಸಿಗ್ನಲ್ ಜಂಪಿಂಗ್ ಪ್ರಕರಣ 10 ಪ್ರಕರಣ, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ 7 ಪ್ರಕರಣ, ಹೆಲ್ಮೆಟ್ ಹಾಕದೆ ವಾಹನ ಚಾಲನೆ 128 ಪ್ರಕರಣ, ಸೀಟ್ ಬೆಲ್ಟ್ ಹಾಕದೆ ಚಾಲನೆಯ 16 ಪ್ರಕರಣಗಳು ದಾಖಲಾಗಿವೆ. ಒಟ್ಟು 298 ಪ್ರಕರಣ. ಈ ಪ್ರಕರಣಗಳಲ್ಲಿ ಡಿಎಲ್ ರದ್ದಿಗೆ ಶಿಫಾರಸು ಮಾಡಲಾಗಿದೆ.