ಬಂಟ್ವಾಳ:ಸಸ್ಯ ಸಂಪತ್ತನ್ನು ವೃದ್ಧಿಸುವ ದೃಷ್ಟಿಯಿಂದ ಪ್ರತಿ ಮಳೆಗಾಲದ ಪ್ರಾರಂಭದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಸಿಗಳನ್ನು ನೆಡುವ ಹಾಗೂ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದ್ದು, ಬಂಟ್ವಾಳ ತಾಲೂಕಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸುಮಾರು 50 ಸಾವಿರಕ್ಕೂ ಅಧಿಕ ಗಿಡಗಳು ವಿತರಣೆ ಸಿದ್ಧಗೊಂಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಸಸಿಗಳು ಉಚಿತವಾಗಿ ವಿತರಣೆಯಾಗಲಿದ್ದು, ಆಸಕ್ತರು ಸೂಕ್ತ ದಾಖಲೆಗಳನ್ನು ನೀಡಿ ಗಿಡಗಳನ್ನು ಪಡೆದುಕೊಳ್ಳಬಹುದಾಗಿದೆ.
ಸಾಮಾಜಿಕ ಅರಣ್ಯ ಬಂಟ್ವಾಳ ವಲಯದ ನೆಟ್ಲಮುಡ್ನೂರಿನ ಕೇಂದ್ರೀಯ ನರ್ಸರಿಯಲ್ಲಿ ಜೂ. 1ರಿಂದ ಗಿಡಗಳ ವಿತರಣೆ ಪ್ರಾರಂಭಗೊಂಡಿದ್ದು, ಈಗಾಗಲೇ 2 ಸಾವಿರಕ್ಕೂ ಅಧಿಕ ಗಿಡಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಜತೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾ.ಪಂ ಫಲಾನುಭವಿಗಳಿಗೆ 2,000 ಕಸಿ ಗೇರು ಗಿಡಗಳು ಕೂಡ ಲಭ್ಯವಿದೆ. ರಸ್ತೆ ಬದಿ, ನೆಡುತೋಪು, ಸರ್ಕಾರಿ ಕಚೇರಿ ಆವರಣಗಳಲ್ಲಿಯೂ ಗಿಡ ನೆಡುವುದಕ್ಕಾಗಿ ಸಾಮಾಜಿಕ ಅರಣ್ಯದಿಂದ ಗಿಡಗಳ ವಿತರಣೆ ನಡೆಯಲಿದೆ. ಮುಖ್ಯವಾಗಿ ಉದ್ಯೋಗ ಸೃಷ್ಟಿಯನ್ನು ಗಮನದಲ್ಲಿರಿಸಿ ನರೇಗಾದ ಮೂಲಕ ಗಿಡಗಳ ವಿತರಣೆ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯ ವತಿಯಿಂದ ರಸ್ತೆ ಬದಿಗಳಲ್ಲೂ ಗಿಡ ನೆಡಲಾಗುತ್ತಿದೆ. ಅದಕ್ಕಾಗಿಯೇ 3 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. ಪ್ರಸ್ತುತ ಸೈಕ್ಲೋನ್ ಪ್ರಭಾವದಿಂದ ಮಳೆಯಾಗುತ್ತಿದ್ದು, ಮುಂದೆ ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭಗೊಂಡರೆ ಅದನ್ನು ನೆಡುವ ಕಾರ್ಯ ನಡೆಯಲಿದೆ ಎಂದು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಅರಣ್ಯದಿಂದ ವಿತರಣೆಯಾಗುವ ಗಿಡಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಹಣ್ಣುಗಳ ಗಿಡಗಳನ್ನು ಕೂಡ ಒಳಗೊಂಡಿರುತ್ತವೆ. ಮುಖ್ಯವಾಗಿ ಹಲಸು, ಹೆಬ್ಬಲಸು, ಪುನರ್ಪುಳಿ, ಮಹಾಗನಿ, ನೆಲ್ಲಿ, ಕಹಿಬೇವು, ಶ್ರೀಗಂಧ, ನಿಂಬೆ, ಸಂಪಿಗೆ, ಬೀಟೆ, ಸೀತಾಫಲ, ನೇರಳೆ, ಜಂಬುನೇರಳೆ ಮುಂತಾದ ಗಿಡಗಳನ್ನು ಬೆಳೆಸಲಾಗಿದೆ.