ಮಂಗಳೂರು(ದಕ್ಷಿಣ ಕನ್ನಡ) :ತೇಲುವ ಚಿನ್ನ ಎಂದೇ ಖ್ಯಾತಿ ಹೊಂದಿರುವ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದ್ದು ಕೋಟ್ಯಾಂತರ ಬೆಲೆಬಾಳುವ ಆ್ಯಂಬರ್ ಗ್ರೀಸ್ ಅಥವಾ ತಿಮಿಂಗಿಲ ವಾಂತಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿಮಿತ್ (26), ಪುಂಜಲ್ ಕಟ್ಟೆಯ ಯೋಗೀಶ್ (41) ಬಂಧಿತರು.
ನಗರದ ಲಾಲ್ ಭಾಗ್ ನ ಕರಾವಳಿ ಮೈದಾನ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ ಅಂಬರ್-ಗ್ರೀಸ್(ತಿಮಿಂಗಿಲ ವಾಂತಿ)ನ್ನು ಇವರು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇವರನ್ನು ವಶಕ್ಕೆ ಪಡೆದುಕೊಂಡು ಕೋಟ್ಯಾಂತರ ರೂಪಾಯಿ ಬೆಲೆಬಾಳುವ 3.2 ಕೆಜಿ ತೂಕದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ)ನ್ನು ಹಾಗೂ 2 ಮೊಬೈಲ್ ಫೋನ್ನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3.2 ಕೋಟಿ ಮೌಲ್ಯವಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪರೂಪದ ಬೆಲೆಬಾಳುವ ಅಂಬರ್ ಗ್ರೀಸ್ ಹಾಗೂ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ಪಿಎಸ್ಐ ಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಏನಿದು ಆ್ಯಂಬರ್ ಗ್ರೀಸ್? :ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲ ಹೊರಹಾಕುವ ವಾಂತಿಯನ್ನು ಆ್ಯಂಬರ್ ಗ್ರೀಸ್ ಎಂದು ಕರೆಯಲಾಗುತ್ತದೆ. ಘನ ಮೇಣದ ರೀತಿಯಲ್ಲಿದ್ದು, ವಾಸನೆಯಿಂದ ಕೂಡಿರಲಿದೆ. ಸುಂಗಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರವಾದ ಬೇಡಿಕೆ ಕೂಡ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಆ್ಯಂಬರ್ ಗ್ರೀಸ್ ಸುಮಾರು ಒಂದು ಕೋಟಿ ರೂಪಾಯಿಗಳ ವರೆಗೆ ಬೆಲೆಯಿದೆ.