ಮಂಗಳೂರು:ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣನಾದ ಅಪರಾಧಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ(ಎಫ್ ಟಿಎಸ್ಇ-1)(ಪೊಕ್ಸೊ) ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹಾರ್ದೊಳ್ಳಿಯ ಶ್ರೀಕಾಂತ್ ಹನುಮಂತ ಎಂಬಾತನು ಶಿಕ್ಷೆಗೊಳಗಾದ ಅಪರಾಧಿ.
ಮಂಗಳೂರಿನ ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕರಂಬಾರು ಗ್ರಾಮದ ಬಾಕ್ಸ್ ಕಂಪನಿಯೊಂದರ ಶೆಡ್‍ನಲ್ಲಿ ಪರಿಶಿಷ್ಟ ಪಂಗಡದ ಬಾಲಕಿ ತನ್ನ ಪಾಲಕರೊಂದಿಗೆ ವಾಸವಿದ್ದಳು. ಅಲ್ಲಿಯೇ ಪಕ್ಕದ ಶೆಡ್‍ನಲ್ಲಿ ಆರೋಪಿ ಕೂಡ ವಾಸ್ತವ್ಯ ಇದ್ದನು.
ಈತ ಬಾಲಕಿಯೊಂದಿಗೆ ಪ್ರೀತಿಸುವುದಾಗಿ ನಂಬಿಸಿ ಆಕೆಯ ಪಾಲಕರು ಮನೆಯಲ್ಲಿ ಇಲ್ಲದ ವೇಳೆ 2019ರ ಎ.12ರಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದನು. ಅಲ್ಲದೇ ಕೃತ್ಯದ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದನು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಫೋಟೋ ವೈರಲ್ ಮಾಡುವುದಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಶಾಲೆಯಲ್ಲಿ ಬಾಲಕಿ ಅನಾರೋಗ್ಯಕ್ಕೀಡಾಗಿದ್ದ ವೇಳೆ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಎಸಿಪಿ ಶ್ರೀನಿವಾಸ ಗೌಡ ಆರ್. ಪ್ರಾಥಮಿಕ ತನಿಖೆ ನಡೆಸಿ, ಎಸಿಪಿ ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು, ಐಪಿಸಿ ಸೆಕ್ಷನ್ 376 (2)(ಎನ್) ಅಡಿಯಲ್ಲಿ ಹತ್ತು ವರ್ಷ ಕಠಿಣ ಸಜೆ ಮತ್ತು 10 000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಕಠಿಣ ಸಜೆ, ಕಲಂ 376(3) ಅಡಿಯಲ್ಲಿ 20 ವರ್ಷ ಕಠಿಣ ಸಜೆ, 10,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಕಠಿಣ ಸಜೆ, ಕಲಂ 506ರ ಅಡಿಯಲ್ಲಿ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 10.50 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶ ನೀಡಿದ್ದಾರೆ.
ಆರಂಭದಲ್ಲಿ ಅಭಿಯೋಜನೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಅವರು ವಾದ ನಡೆಸಿದರು. ಮುಂದಿನ ವಾದವನ್ನು ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಮಂಡಿಸಿದ್ದರು.
ಇದನ್ನೂ ಓದಿ:ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ದದ ಪಿತೂರಿ ಆರೋಪ: ಬಸವರಾಜನ್, ಸೌಭಾಗ್ಯ ಪ್ರಕರಣ ರದ್ದುಪಡಿಸಿದ ಹೈಕೋರ್ಟ್