ಮಂಗಳೂರು: ರಂಜಾನ್ ಹಿನ್ನೆಲೆ ನಗರದ ಖರ್ಜೂರ ವ್ಯಾಪಾರ ಸಂಸ್ಥೆಯೊಂದು ಹೊರದೇಶಗಳಿಂದ ಖರ್ಜೂರಗಳನ್ನು ಆಮದು ಮಾಡಿಕೊಂಡು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವ್ಯಾಪಾರ ಮಾಡುತ್ತಿದೆ.
ಹೌದು, ಮಂಗಳೂರನ್ನು ಕೇಂದ್ರೀಕರಿಸಿ ವಹಿವಾಟು ನಡೆಸುವ ರೀಮ್ ಎಂಬ ಖರ್ಜೂರ ವ್ಯಾಪಾರ ಸಂಸ್ಥೆಯಲ್ಲಿ ವಿವಿಧ ದೇಶಗಳ, ವಿವಿಧ ರೀತಿಯ, ವಿವಿಧ ರುಚಿಯ ಖರ್ಜೂರಗಳು ಮಾರಾಟಕ್ಕಿವೆ. ಇಲ್ಲಿ ಪ್ಯಾಲೆಸ್ತೇನಿಯಾ, ಜೋರ್ಡಾನ್, ಇಸ್ರೇಲ್, ಯುಎಸ್ಎ ದೇಶಗಳ ಮೆಡ್ ಜೋಲ್ ಖರ್ಜೂರ, ಸೌದಿ ಅರೇಬಿಯಾದ ಮೆಬ್ರೂಮ್, ಸಫಾವಿ, ಖುದ್ರಿ, ಸುಕ್ಕರಿ, ಅಜ್ವಾ, ಶೆಬ್ಲಿ ಖರ್ಜೂರಗಳು, ಯುಎಇ ದೇಶಗಳ ಫರ್ದ್, ಖೆನಜಿ ಖರ್ಜೂರ, ಇರಾನ್ ದೇಶದ ಮರ್ಯಾಮ್, ಮಝಾಫತಿ ಖರ್ಜೂರ, ಇರಾಕ್ ದೇಶದ ಝಹಾದಿ ಖರ್ಜೂರ, ಓಮಾನ್ ದೇಶದ ಓಮಾನ್ ಎಂಬ ಖರ್ಜೂರಗಳು ದೊರೆಯುತ್ತವೆ.
ರೀಮ್ ಖರ್ಜೂರ ವ್ಯಾಪಾರ ಸಂಸ್ಥೆ ಇಲ್ಲಿ ಸುಮಾರು 450 ರೂ.ನಿಂದ 1800 ರೂ. ವರೆಗಿನ ದುಬಾರಿ ಬೆಲೆಯ ಖರ್ಜೂರಗಳು ದೊರೆಯುತ್ತದೆ. ಗ್ರಾಹಕರೂ ರೀಮ್ ಸಂಸ್ಥೆಯ ಖರ್ಜೂರಗಳ ರುಚಿಗೆ ಮಾರು ಹೋಗಿದ್ದಾರೆ. ಹಾಗಾಗಿ ಜನರು ರೀಮ್ ಸಂಸ್ಥೆಯನ್ನು ಹುಡುಕಿಕೊಂಡು ಬಂದು ಖರ್ಜೂರ ಖರೀದಿಸುತ್ತಾರಂತೆ. ನೂರು ವರ್ಷಗಳ ಹಿಂದೆ ಅಂದರೆ 1918 ರಂದು ರೀಮ್ ಎಂಬ ಖರ್ಜೂರ ವ್ಯಾಪಾರ ಸಂಸ್ಥೆ ಮಂಗಳೂರಿನ ಬಂದರಿನಲ್ಲಿ ಸ್ಥಾಪನೆಗೊಂಡಿತು. ಇಂದು ಈ ಸಂಸ್ಥೆಯ ಮೂರು ಮತ್ತು ನಾಲ್ಕನೇ ತಲೆಮಾರಿನವರು ವ್ಯಾಪಾರದಲ್ಲಿ ತೊಡಗಿದ್ದಾರೆ. ವ್ಯಾಪಾರವೂ ವಿಸ್ತಾರಗೊಂಡಿದೆ. ವಿವಿಧ ದೇಶಗಳಿಂದ ಈಗ ಖರ್ಜೂರ ಖರೀದಿಸುತ್ತಿದ್ದಾರೆ. ಇಂದು ಮಂಗಳೂರಿನ ಬಂದರಿನಲ್ಲಿರುವ ವ್ಯಾಪಾರ ಸಂಸ್ಥೆ ಮಾತ್ರವಲ್ಲದೆ, ನಗರದ ಬೃಹತ್ ಮಾಲ್ಗಳಾದ ಸಿಟಿ ಸೆಂಟರ್, ಪೋರಂ ಫಿಝಾ ಮಾಲ್ಗಳಲ್ಲಿ ರೀಮ್ ಸಂಸ್ಥೆಯ ಖರ್ಜೂರ ಶಾಪ್ ಇದೆ. ಅಲ್ಲದೆ ಅತ್ತಾವರ, ಬಿಜೈ ಮಾತ್ರವಲ್ಲದೆ ಬೆಂಗಳೂರು, ಮುಂಬಯಿಗಳಲ್ಲಿಯೂ ಖರ್ಜೂರ ವ್ಯಾಪಾರ ಕೇಂದ್ರಗಳಿವೆ.
ರೀಮ್ ಖರ್ಜೂರ ವ್ಯಾಪಾರ ಸಂಸ್ಥೆಯ ಉದ್ದಿಮೆದಾರ ಮೊಹಮ್ಮದ್ ಮುಕ್ತಾರ್ ಮಾತನಾಡಿ, ಖರ್ಜೂರ ಹೆಚ್ಚು ಖರೀದಿಯಾಗುವುದು ರಂಜಾನ್ ತಿಂಗಳಲ್ಲಿ. ಈ ಸಂದರ್ಭ ಖರ್ಜೂರ ತಿನ್ನುವುದು ಮುಸ್ಲಿಂ ಸಮುದಾಯದ ಸಂಪ್ರದಾಯ. ಹಿಂದೆ ಖರ್ಜೂರದ ಬಗ್ಗೆ ಜನರಿಗೆ ಹೆಚ್ಚು ಗೊತ್ತಿರಲಿಲ್ಲ. ಹಾಗಾಗಿ ಭಾರತಕ್ಕೆ ಎರಡು ಮೂರು ಮಾದರಿಯ ಖರ್ಜೂರ ಆಮದಾಗುತ್ತಿತ್ತು. ಆದರೆ ಈಗ ಸುಮಾರು 16-17 ರಾಷ್ಟ್ರಗಳಿಂದ ಖರ್ಜೂರ ಬರುತ್ತಿವೆ. ಸುಮಾರು 40-50 ವಿವಿಧ ಮಾದರಿಯ ಖರ್ಜೂರ ನಮ್ಮಲ್ಲಿ ವರ್ಷದ ಯಾವ ಸಂದರ್ಭಗಳಲ್ಲಿಯೂ ಮಾರಾಟವಾಗುತ್ತದೆ. ಜನರಿಗೂ ವಿವಿಧ ಬಗೆಯ ಖರ್ಜೂರಗಳ ಬಗ್ಗೆ ಗೊತ್ತಿದೆ. ನಿರ್ದಿಷ್ಟವಾದ ಹೆಸರು ಹೇಳಿ ಖರ್ಜೂರ ಖರೀದಿಸಲು ಬರುತ್ತಾರೆ ಎಂದು ಹೇಳುತ್ತಾರೆ.
ನಮ್ಮದು ಬಹಳ ಹಳೆಯ ಕಾಲದಿಂದಲೂ ಖರ್ಜೂರ ವ್ಯಾಪಾರದಲ್ಲಿ ತೊಡಗಿರುವ ಕುಟುಂಬ. ನಾನು ಈ ವ್ಯಾಪಾರದಲ್ಲಿ ತೊಡಗಿರುವ ಮೂರನೇಯ ತಲೆಮಾರು. ಅಲ್ಲದೆ ಖರ್ಜೂರ ಒಂದು ಒಳ್ಳೆಯ ತಿನಿಸು. ನ್ಯಾಚುರಲ್ ಆಗಿರುತ್ತದೆ ಮತ್ತು ಯಾವುದೇ ರಾಸಾಯನಿಕ ಮಿಶ್ರಿತವಲ್ಲ. ಸಾವಯವ ಎಂದರೂ ತಪ್ಪಿಲ್ಲ. ಖರ್ಜೂರದಲ್ಲಿ ಮಾನವನ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶಗಳು ಯಥೇಚ್ಛವಾಗಿ ಇದೆ. ಕೆಲವೊಂದು ದೈಹಿಕ ನ್ಯೂನತೆಗಳಿಗೆ ವೈದ್ಯರುಗಳು ಖರ್ಜೂರವನ್ನು ಔಷಧಿ ರೂಪದಲ್ಲಿ ಬಳಸಲು ಹೇಳುತ್ತಾರೆ. ಹಾಗಾಗಿ ಜನರೂ ಇತ್ತೀಚಿನ ವರ್ಷಗಳಲ್ಲಿ ಖರ್ಜೂರ ಖರೀದಿಸಲು ಹೆಚ್ಚು ಹೆಚ್ಚು ಉತ್ಸುಕರಾಗುತ್ತಿದ್ದಾರೆ ಎಂದು ಮೊಹಮ್ಮದ್ ಮುಕ್ತಾರ್ ಹೇಳುತ್ತಾರೆ.