ಕರ್ನಾಟಕ

karnataka

ETV Bharat / state

ದೇಶಕ್ಕೆ ಕಾಂಗ್ರೆಸ್​ ಅನಿವಾರ್ಯ, ಫಿನಿಕ್ಸ್​ನಂತೆ ಮತ್ತೆ ಎದ್ದು ಬರಲಿದೆ: ರಮಾನಾಥ ರೈ ಭವಿಷ್ಯ - ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಇಂದು ಕಾಂಗ್ರೆಸ್​ಗೆ ಅಧಿಕಾರ ಇಲ್ಲದಿರಬಹುದು. ಈ ಪರಿಸ್ಥಿತಿ ಹಿಂದೆಯೂ ಬಂದಿತ್ತು. ದೇಶದಲ್ಲಿಯೂ ಕಾಂಗ್ರೆಸ್ ವಿಭಜನೆಯಾಗಿ ಅನೇಕ ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಹೋಗಿದ್ದರು. ಆದರೆ ಕಾಂಗ್ರೆಸ್ ಮಾತ್ರ ಅವಿನಾಶಿಯಾಗಿ ಬೆಳೆಯುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ramanatha-rai-speaks-on-congress-party
ramanatha-rai-speaks-on-congress-party

By

Published : Dec 28, 2020, 4:00 PM IST

ಮಂಗಳೂರು:ಕಾಂಗ್ರೆಸ್ ನಾಶವಾಗುತ್ತದೆಂದು ತಿಳಿದುಕೊಂಡಲ್ಲಿ ಅದು ಮೂರ್ಖತನ‌. ಈ ದೇಶದ ಜನತೆಗೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆಯಿದೆ. ಆದ್ದರಿಂದ ಮತ್ತೆ ಫಿನಿಕ್ಸ್​ನಂತೆ ಎದ್ದು ಬರಲಿದೆ‌ ಎಂದು ಮಾಜಿ ಸಚಿವ ರಮಾನಾಥ ರೈ ಭವಿಷ್ಯ ನುಡಿದರು.

ದ.ಕ.ಜಿಲ್ಲಾ ಇಂಟಕ್, ಯೂತ್ ಇಂಟಕ್ ಮತ್ತು ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಕಾಂಗ್ರೆಸ್ ಸ್ಥಾಪನಾ ದಿನಾಚರಣೆ ಹಾಗೂ ಇಂಟಕ್ ರಾಷ್ಟ್ರೀಯ ನಾಯಕ ರಾಕೇಶ್ ಮಲ್ಲಿಯವರ 50ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್​ಗೆ ಅಧಿಕಾರ ಇಲ್ಲದಿರಬಹುದು. ಈ ಪರಿಸ್ಥಿತಿ ಹಿಂದೆಯೂ ಬಂದಿತ್ತು. ದೇಶದಲ್ಲಿ ಕಾಂಗ್ರೆಸ್ ವಿಭಜನೆಯಾಗಿ ಅನೇಕ ನಾಯಕರು ಪಕ್ಷ ತೊರೆದು ಹೋಗಿದ್ದರು. ಆದರೆ ಕಾಂಗ್ರೆಸ್ ಮಾತ್ರ ಅವಿನಾಶಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಶವಾದಲ್ಲಿ ಮತೀಯವಾದಿಗಳಿಗೆ ಅಧಿಕಾರಕ್ಕೆ ಬರಲು ಸುಲಭವಾಗುತ್ತದೆ. ಕಾಂಗ್ರೆಸ್ ಸೋತಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆದರೆ ಬಿಜೆಪಿ ಸೋತಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಹೊರತು ಇನ್ನಾವುದೇ ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸ್ಥಾಪನಾ ದಿನಾಚರಣೆ

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿದ ಸಂಘಟನೆಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಇಂದು ಇತರ ಪಕ್ಷಗಳು ಪ್ರಜಾಪ್ರಭುತ್ವದ ಧೋರಣೆಗಳನ್ನು ಬೋಧನೆ ಮಾಡಲು ಹೊರಟಿವೆ. ಕಾಂಗ್ರೆಸ್ ದೇಶಕ್ಕೆ ಕೇವಲ ಸ್ವಾತಂತ್ರ್ಯ ಗಳಿಸಿಕೊಟ್ಟಿರುವುದು ಮಾತ್ರವಲ್ಲ, ಜನತೆಗೆ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯವನ್ನೂ ದೊರಕಿಸಿಕೊಟ್ಟಿರುವ ಪಕ್ಷ‌. ಆದ್ದರಿಂದ ಕಾಂಗ್ರೆಸ್​ಗೆ ಯಾರ ಬೋಧನೆಯ ಅವಶ್ಯಕತೆ ಇಲ್ಲ ಎಂದು ರಮಾನಾಥ ರೈ ವ್ಯಂಗ್ಯವಾಡಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, 72 ವರ್ಷಗಳ ಆಳ್ವಿಕೆಯಲ್ಲಿ ಕಾಂಗ್ರೆಸ್ ಕೊಡುಗೆಯೇನು ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗ ದೇಶದ ಜನಸಂಖ್ಯೆ 35 ಕೋಟಿ. ಅದರಲ್ಲಿ 30 ಕೋಟಿ ಜನರಿಗೆ ಸ್ವಂತ ಜಾಗ, ಸೂರು ಇರಲಿಲ್ಲ.‌ ಎಲ್ಲೆಡೆಯೂ ಬಡತನವಿತ್ತು, ವಸತಿ, ವಿದ್ಯಾಭ್ಯಾಸ, ಉದ್ಯೋಗ ಇರಲಿಲ್ಲ. ಇಂದು ದೇಶದ ಜನತೆಯ ಸಂಖ್ಯೆ 135 ಕೋಟಿಗೇರಿದೆ. ಅದರಲ್ಲಿ 100 ಕೋಟಿ ಜನರಿಗೆ ಸ್ವಂತ ಸೂರು, ಉದ್ಯೋಗ, ವಿದ್ಯಾಭ್ಯಾಸವಿದೆ. ಇದಲ್ಲದೆ ಮೊಬೈಲ್ ಫೋನ್, ಟೆಲಿವಿಷನ್, ಮಂಗಳಗ್ರಹಕ್ಕೆ ಕ್ಷಿಪಣಿ ಉಡಾವಣೆ ಇದೆಲ್ಲವೂ ಕಾಂಗ್ರೆಸ್​ನ ಕೊಡುಗೆಯೇ ಹೊರತು ನಿನ್ನೆ ಮೊನ್ನೆ ಬಂದಿರುವ ಮೋದಿ ಸರಕಾರದ ಕೊಡುಗೆಯಲ್ಲ ಎಂದು ಹೇಳಿದರು.

ಒಂದು ರೀತಿಯ ಅಪಪ್ರಚಾರದ ಮೂಲಕ ಈಗ ಕಾಂಗ್ರೆಸ್​ಗೆ ಸೋಲು ಬಂದಿರಬಹುದು. ಈ ಸೋಲು ಶಾಶ್ವತವಲ್ಲ. ಕಾಂಗ್ರೆಸ್ ಪಕ್ಷ ಎಷ್ಟು ಸೋಲು ಕಂಡಿದೆಯೋ, ಅಷ್ಟೇ ಚಿಗುರಿ ಮತ್ತೆ ಅಧಿಕಾರಕ್ಕೇರಿದ ಎಷ್ಟೋ ಉದಾಹರಣೆಗಳಿವೆ. ಈ ಸಂಸ್ಥಾಪನಾ ದಿನದಂದು ನನಗೇನು ಕಾಂಗ್ರೆಸ್ ನೀಡಿದೆ ಎಂಬುದಕ್ಕಿಂತ ಕಾಂಗ್ರೆಸ್​ಗೆ ನಾನೇನು ಮಾಡಿದ್ದೇನೆ ಎಂಬುದರ ಬಗ್ಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ವಿನಯ್ ಕುಮಾರ್ ಸೊರಕೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭ ಸಾಮಾಜಿಕ ಕಳಕಳಿಯ ಸೇವೆಗಾಗಿ 800 ಕುಟುಂಬಕ್ಕೆ ಅಕ್ಕಿ ವಿತರಣಾ ಕಾರ್ಯಕ್ರಮ ಹಾಗೂ ಇಂಟಕ್ ಸದಸ್ಯರಿಂದ ರಕ್ತದಾನ ನಡೆಯಿತು. ಕಾರ್ಯಕ್ರಮದಲ್ಲಿ‌ ದೈವ ಪಾತ್ರಿ ಮುತ್ತು, ಕೋವಿಡ್ ವಾರಿಯರ್ ಮುನೀರ್ ಬಾವಾ ಹಾಗೂ 112 ಬಾರಿ ರಕ್ತದಾನಗೈದ ಸುಧಾಕರ ರೈಯವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ, ಮಾಜಿ ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್​ಗಳಾದ ಕವಿತಾ ಸನಿಲ್, ಶಶಿಧರ್ ಹೆಗ್ಡೆ, ಭಾಸ್ಕರ ಮೊಯ್ಲಿ, ವರುಣ್ ಎಸ್.ಕೆ., ತೇಜಸ್ವಿ ರಾಜ್, ಪದ್ಮಸ್ಮಿತ್ ಅಧಿಕಾರಿ, ಪುನೀತ್ ಶೆಟ್ಟಿ, ಲಕ್ಷ್ಮೀ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details