ಬಂಟ್ವಾಳ :ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಅವರು ನನ್ನ ಹೆಸರು ಹೇಳಿ ತೇಜೋವಧೆ ಮಾಡುತ್ತಿದ್ದು, ಅವರು ಮಾಡುವ ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ. ಬಂಟ್ವಾಳ ಪುರಸಭೆಗೆ ಎಸ್‌ಡಿಪಿಐ ಜೊತೆ ಹೊಂದಾಣಿಕೆಗೆ ಗುಪ್ತ ಸಭೆ ಮಾಡಿದ್ದಾರೆ ಎಂದು ಆಪಾದಿಸಿದ್ದಕ್ಕೆ ಸಾಕ್ಷ್ಯ ನೀಡಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಸವಾಲೆಸೆದಿದ್ದಾರೆ.
ಬಂಟ್ವಾಳದ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ ಅವರು, ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಎಸ್‌ಡಿಪಿಐ ಸದಸ್ಯೆಯನ್ನು ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಡಿದ್ದನ್ನು ಬಿಜೆಪಿ ನೆನಪು ಮಾಡಿಕೊಳ್ಳಲಿ ಎಂದರು.
ನಾನು ಈವರೆಗೆ ಹರಿಕೃಷ್ಣ ಬಂಟ್ವಾಳ್ ಅಥವಾ ಶಾಸಕ ರಾಜೇಶ್ ನಾಯ್ಕ್ ಹೆಸರು ಹೇಳಿ ಎಲ್ಲೂ ಆಪಾದನೆಗಳನ್ನು ಮಾಡಿಲ್ಲ. ಯಾರ ವೈಯಕ್ತಿಕ ಅಥವಾ ಕುಟುಂಬದ ಚಾರಿತ್ರ್ಯ ಹನನ ಮಾಡುವ ಕೆಲಸ ಮಾಡಿಲ್ಲ.
ಆದರೆ, ನನ್ನ ಕುರಿತಾಗಿ ಅವಹೇಳನ ಮಾಡಲಾಗುತ್ತಿದೆ. ಡಿಎನ್‌ಎ ಕುರಿತ ಹೇಳಿಕೆಯನ್ನೂ ನೀಡಲಾಗಿದ್ದು, ಅತ್ಯಂತ ಹೀನಾಯವಾಗಿ ನನ್ನನ್ನು ದೂರಲಾಗುತ್ತಿದೆ ಎಂದು ರೈ ಹೇಳಿದರು. ಕೆಲ ವರ್ಷಗಳ ಅವಧಿಯಲ್ಲಿ ಶರತ್ ಮಡಿವಾಳ, ನಾಸಿರ್, ಆಶ್ರಫ್ , ಹರೀಶ್ ಪೂಜಾರಿ, ಭಾರತಿ, ಅಬ್ದುಲ್ಲಾ ಈ ರೀತಿ ಅನೇಕರ ಹತ್ಯೆಗಳು ಆಗಿವೆ. ಈ ಪೈಕಿ ಈ ಭಾರತಿ ಹಾಗೂ ಅಬ್ದುಲ್ಲಾ ಕೊಲೆ ಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ ಎಂದು ಅಂದು ಬಿಜೆಪಿಯೇ ಹೇಳಿತ್ತು.
ಆಗ ಬಿಜೆಪಿ ಯಾರನ್ನು ದೂರಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಹೇಳಿದ ರೈ, ಹರಿಕೃಷ್ಣ ಬಂಟ್ವಾಳ್ ಕಾಂಗ್ರೆಸ್ಗೆ ವಿಶ್ವಾಸದ್ರೋಹವೆಸಗಿದ್ದಾರೆ. ಬಿಜೆಪಿಯ ನಾಯಕರೂ ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು. ಶಾಸಕರೊಬ್ಬರ ಸಂಬಂಧಿಯ ಪರವಾನಿಗೆ ಹೆಸರಲ್ಲಿ ರೆಡ್ ಬಾಕ್ಸೈಟ್ ಗಣಿಗಾರಿಕೆ ಕುರಿತು ತಾನು ಆರೋಪ ಮಾಡಿದ್ದೇನೆ.
ಆದರೆ, ಯಾರ ಹೆಸರನ್ನೂ ತಾನು ಹೇಳಿಲ್ಲ ಎಂದು ಹೇಳಿದ ರೈ, ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಪ್ರತಿ ತಿಂಗಳು ಬರುತ್ತಿದ್ದ ನಾಲ್ಕು ಲಕ್ಷ ದೇವರ ಹುಂಡಿಯ ಹಣ ನಿಲ್ಲಿಸಿದ್ದೇನೆಯೇ ಹೊರತು ಅಕ್ಕಿ ಬರುವುದನ್ನು ನಿಲ್ಲಿಸಿಲ್ಲ. ಅದರಲ್ಲೂ ತನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು ಎಂದರು.