ಬಂಟ್ವಾಳ: ಕೇವಲ ಘೋಷಣೆಗಳನ್ನಷ್ಟೇ ಹೇಳುವುದಾಯ್ತು, ರಾಜ್ಯ ಸರ್ಕಾರಕ್ಕೆ ಅಂತ್ಯ ಸಂಸ್ಕಾರಕ್ಕೆ ನೀಡುವ ಹಣವನ್ನೂ ಒದಗಿಸಲು ಆಗಿಲ್ಲ, ಬಡವರಿಗೆ ಒಂದೇ ಒಂದು ಮನೆ ನೀಡದೆ, ಜಾಹೀರಾತು ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದೆ. ಬಡವರ, ಕೂಲಿ ಕಾರ್ಮಿಕರ, ನೆರೆ ಪೀಡಿತರಿಗೆ ಹಾಗೂ ಜನಸಾಮಾನ್ಯರಿಗೆ ಸರ್ಕಾರ ಘೋಷಿಸಿದ ಸವಲತ್ತುಗಳು ತಲುಪಲೇ ಇಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಬಂಟ್ವಾಳ ಮತ್ತು ಪಾಣೆ ಮಂಗಳೂರು ಬ್ಲಾಕ್ ಸಮಿತಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸಿದರು.
ಶವಸಂಸ್ಕಾರಕ್ಕೆ ಕೊಡಲೂ ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ : ರಮಾನಾಥ ರೈ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ಇತ್ತು ಎಂಬುದನ್ನು ಜ್ಞಾಪಿಸದ ಬಿಜೆಪಿಯವರು, ಬಳಿಕ ಮೋದಿ ಸರ್ಕಾರ ಬಂದಾಗ, ಸಿದ್ಧರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತ ಸವಲತ್ತು ನೀಡಿದಾಗ ಅದರಲ್ಲಿ ಕೇಂದ್ರದ ಪಾಲೂ ಇದೆ ಎಂದರು. ವಾಸ್ತವವಾಗಿ ಉಚಿತ ಅಕ್ಕಿ ಯೋಜನೆಯನ್ನು ಜಾರಿಗೆ ತಂದದ್ದೇ ಕಾಂಗ್ರೆಸ್ ಸರ್ಕಾರ. ಇಂದಿರಾ ಕ್ಯಾಂಟೀನ್, ಭೂಮಸೂದೆಯಂಥ ಕಾನೂನುಗಳ ಮೂಲಕ ಬಡವರ ಪರವಾಗಿದ್ದರೆ, ಬಿಜೆಪಿಯವರು ಕೇವಲ ಟೀಕೆ ಮಾಡುವುದರಲ್ಲೇ ಕಾಲ ಕಳೆದರು ಎಂದು ಹರಿಹಾಯ್ದರು.
ಕೇಂದ್ರ, ರಾಜ್ಯಗಳೆರಡರಲ್ಲೂ ಅಧಿಕಾರ ಹೊಂದಿದರೂ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ, ಭರವಸೆಗಳು ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ನೀಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ರೈ ಆರೋಪಿಸಿದರು. ಬಿಜೆಪಿ ಸರಕಾರ ಬಂದ ಬಳಿಕ ಯಾವೊಬ್ಬ ಬಡವನಿಗೂ ಮನೆ ಸಿಕ್ಕಿಲ್ಲ. ಕಳೆದ ಎರಡು ವರ್ಷದಿಂದ ಅಂತ್ಯ ಸಂಸ್ಕಾರಕ್ಕೆ ನೀಡುವ ಹಣವನ್ನೂ ಈ ಸರಕಾರ ನೀಡುತ್ತಿಲ್ಲ, ಪೊಲೀಸರಿಗೆ ನೀಡುತ್ತಿದ್ದ ಭತ್ಯೆ ನಿಲ್ಲಿಸಿದ್ದು, ಕೇವಲ ಘೋಷಣೆಯನ್ನಷ್ಟೇ ಮಾಡುತ್ತಿದೆ ಎಂದು ಆರೋಪಿಸಿದರು.
ಬಂಟ್ವಾಳ ಪುರಸಭೆಯ ಮೀಸಲಾತಿಗಾಗಿ ನಾವು ಕೋರ್ಟ್ಗೆ ಹೋಗುವುದಿಲ್ಲ ಎಂದ ರೈ, ಹಿಂದೆ ಮೀಸಲಾತಿ ಪಟ್ಟಿ ಬಂದಾಗ ಕೆಲವರು ಕೋರ್ಟಿಗೆ ಹೋದರು, ಅವರಂತೆ ನಾವು ಮಾಡುವುದಿಲ್ಲ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದರು.