ಕರ್ನಾಟಕ

karnataka

ETV Bharat / state

ಕೋವಿಡ್‌ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ರಮಾನಾಥ ರೈ

ಕೋವಿಡ್​ ಎರಡನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿರುವುದು ಬಹಳ ನೋವಿನ ಸಂಗತಿ. ವೆಂಟಿಲೇಟರ್, ಬೆಡ್ ಬ್ಲಾಕಿಂಗ್, ಐಸಿಯು, ಮೆಡಿಸಿನ್ ಕೊರತೆ, ಬ್ಲಾಕ್ ಫಂಗಸ್‌ಗೆ ಔಷಧಿ ಕೊರತೆಗಳು.. ಹೀಗೆ ನಾನಾ ಸಮಸ್ಯೆಗಳು ಸರ್ಕಾರದ ವೈಫಲ್ಯವನ್ನು ಸೂಚಿಸುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಟೀಕಿಸಿದರು.

By

Published : May 28, 2021, 8:28 AM IST

ramanatha rai
ಮಾಜಿ ಸಚಿವ ಬಿ. ರಮಾನಾಥ ರೈ

ಪುತ್ತೂರು: ಕೊರೊನಾ ಎಂಬುದು ರಾಷ್ಟ್ರೀಯ ವಿಪತ್ತು. ಇದನ್ನು ನಿಯಂತ್ರಿಸುವಲ್ಲಿ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಆದರೆ ಮಾರಕ ರೋಗದ ನಿಯಂತ್ರಣ ಕಾರ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

ನಿನ್ನೆ ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹೆಚ್ಚಳಕ್ಕೆ ಚುನಾವಣಾ ಆಯೋಗವೂ ಕಾರಣ. ಇದರೊಂದಿಗೆ ನಮಸ್ತೆ ಟ್ರಂಪ್ ಕಾರ್ಯಕ್ರಮವೂ ಕಾರಣವಾಗಿದೆ ಎಂದು ಹೇಳಿದರು.

ಕೊರೊನಾ ಪೀಡಿತರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವುದು ನೋವಿನ ವಿಚಾರ. ಇದರೊಂದಿಗೆ ವೆಂಟಿಲೇಟರ್, ಬೆಡ್ ಬ್ಲಾಕಿಂಗ್, ಐಸಿಯು, ಮೆಡಿಸಿನ್ ಕೊರತೆಗಳು, ಬ್ಲಾಕ್ ಫಂಗಸ್‌ಗೆ ಔಷಧಿ ಕೊರತೆಗಳು ಸರ್ಕಾರದ ವೈಫಲ್ಯವನ್ನು ಸೂಚಿಸುತ್ತದೆ ಎಂದರು.

ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ಟೀಕೆ

ಸರ್ಕಾರ ಲಾಕ್‌ಡೌನ್ ಮಾಡಿರುವುದು ಸರಿ. ಆದರೆ ಅದರೊಂದಿಗೆ ಜನರ ಆಹಾರದ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಬೇಕಿತ್ತು. ಕೇರಳ ಇನ್ನಿತರೆ ಕೆಲ ರಾಜ್ಯಗಳಲ್ಲಿ ಜನರ ಆಹಾರದ ಸಮಸ್ಯೆಯನ್ನು ಪರಿಹರಿಸಲು ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ವ್ಯವಸ್ಥೆಗಳಾಗಬೇಕಿತ್ತು. ಇನ್ನಾದರೂ ಸರ್ಕಾರವು ವಲಸೆ ಕಾರ್ಮಿಕರಿಗೆ ಗಂಜಿ ಕೇಂದ್ರ ಸೇರಿದಂತೆ ಬಡವರ ಹಸಿವು ನೀಗಿಸಲು, ಅವರಿಗೆ ಬದುಕಲು ಬೇಕಾದ ವ್ಯವಸ್ಥೆಯನ್ನು ಮಾಡಬೇಕು. ಅದೆಲ್ಲವನ್ನೂ ಮಾಡದೆ ಲಾಕ್‌ಡೌನ್ ಮಾಡಿದಲ್ಲಿ ಜನರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಜತೆಗೆ ಪ್ಯಾಕೇಜ್​ ಕೇವಲ ಬಡವರ ಕಣ್ಣೊರೆಸುವ ತಂತ್ರ ಎಂದು ಅಸಮಾಧಾನ ಹೊರಹಾಕಿದರು.​

ಕೊರೊನಾ ಲಸಿಕೆಯ ಮೊದಲ ಡೋಸ್​​ ಪಡೆದುಕೊಂಡವರಿಗೆ 2ನೇ ಹಂತದ ಲಸಿಕೆ ಸಿಗುತ್ತಿಲ್ಲ. ವ್ಯಾಕ್ಸಿನ್ ಕೊರತೆಯಿಂದ ಜನರಿಗೆ ತೊಂದರೆಯಾಗಿದೆ. ಹೀಗೆ ಆದಲ್ಲಿ ದೇಶದ 130 ಕೋಟಿ ಜನರಿಗೆ ಲಸಿಕೆ ನೀಡಲು ಎಷ್ಟು ಸಮಯ ಕಾಯಬೇಕಾದೀತು ಎಂಬುದು ಪ್ರಶ್ನಾರ್ಹ. ಅಲೋಪತಿ ಔಷಧಿಗಳ ಬಗ್ಗೆ ಸರ್ಕಾರದ ಮಂತ್ರಿಗಳೇ ನಂಬಿಕೆ ಇಲ್ಲದಂತೆ ಮಾತನಾಡುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರ ರಾಷ್ಟೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ಬಳಿಕ ಬಂದ ಬಿಜೆಪಿ ಸರ್ಕಾರ ಈ ಬಗ್ಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು. ಇನ್ನೂ ಗಂಗಾನದಿಯಲ್ಲಿ ತೇಲಿ ಬಂದಿರುವ ಹೆಣಗಳೇ ಆಡಳಿತ ಪಕ್ಷದ ನಿಷ್ಕ್ರೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ:ನಕಲಿ ಡಯಾಗ್ನೋಸ್ಟಿಕ್‌ ಸೆಂಟರ್‌, ನಕಲಿ ಕೋವಿಡ್‌ ರಿಪೋರ್ಟ್‌: ಬೆಳಗಾವಿಯಲ್ಲಿ ಸಿಕ್ಕಿಬಿದ್ದ ನಯವಂಚಕ

ಬಡಜನರಿಗೆ ಸೌಲಭ್ಯವನ್ನು ಇಲ್ಲದಂತೆ ಮಾಡಲು ಇದೀಗ ಬಿಜೆಪಿ ಸರ್ಕಾರವು ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕೆಲಸಕ್ಕೆ ಕೈಹಾಕಿದೆ. ಬಡವರ ಹಸಿವು ನೀಗಿಸಲೆಂದು ಹಿಂದಿನ ಕಾಂಗ್ರೆಸ್ ಸರ್ಕಾರ ರೂಪಿಸಿದ ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆದಾರರಿಗೆ ಹಣ ನೀಡದೆ ವಂಚನೆ ನಡೆಸಲಾಗುತ್ತಿದೆ. ಕೊರೊನಾ ವಾರಿಯರ್ಸ್​ಗಳಾದ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಸಂಬಳ ನೀಡದೆ ಸತಾಯಿಸುತ್ತಿದೆ. ತನ್ನ ಈ ಎಲ್ಲಾ ತಪ್ಪುಗಳನ್ನು ಮುಚ್ಚಿಹಾಕಲು ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ರೈತರ ಚಳವಳಿ ನಡೆಯುತ್ತಿದೆ. ಈ ಚಳವಳಿದಾರರ ಜತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸದೆ ಮೊಂಡುತನ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details