ಬೆಳ್ತಂಗಡಿ:ಕೊರೊನಾ ಗೆದ್ದು ಬಂದ ಕುಟುಂಬಕ್ಕೆ ರಾಜಕೇಸರಿ ಸಂಘಟನೆಯು ಸಹಾಯ ಹಸ್ತ ಚಾಚುವ ಮೂಲಕ ಇತರರಿಗೆ ಮಾದರಿಯಾಗಿದೆ.
ಉಜಿರೆಯ ಖಾಸಗಿ ಸಂಸ್ಥೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಧ್ಯೆ ಕೋವಿಡ್ ದೃಢಪಟ್ಟು, ಬಳಿಕ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ತಲುಪಿದ ಮುಂಡಾಜೆ ಗ್ರಾಮದ ಅಗರಿಯ ಯುವತಿಯ ಕುಟುಂಬಕ್ಕೆ ರಾಜಕೇಸರಿ ಸಂಘಟನೆ ನೆರವಾಗಿದೆ.
ಸಂಘಟನೆಯ ಸದಸ್ಯರು ಇಂದು ಸಂತ್ರಸ್ತರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ 25 ಕೆ.ಜಿ ಅಕ್ಕಿ, ದಿನಸಿ ಸಾಮಗ್ರಿಗಳು, 2 ಸಾವಿರ ರೂ. ನಗದು ಹಸ್ತಾಂತರ ಮಾಡಿದ್ದಾರೆ.
ಕುಟುಂಬದ ಸದಸ್ಯೆ ಕೊರೊನಾದಿಂದ ಕೂಲಿ ಮಾಡಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದರೆ, ಮನೆಯಲ್ಲಿ ವೃದ್ಧೆ ತಾಯಿ ಕೂಡಾ ಇದ್ದಾರೆ. ಪತಿ ಚಾಲಕರಾಗಿದ್ದರೂ ಕೂಡಾ ಸೀಲ್ ಡೌನ್ ಕಾರಣದಿಂದ ಕೂಲಿ ಮಾಡಲಾಗದೆ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದರು.
ಅಖಿಲ ಕರ್ನಾಟಕ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಅವರ ನೇತೃತ್ವದ ನಿಯೋಗದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ಅನಿಲ್,
ಉಜಿರೆ ಘಟಕದ ಸಂಚಾಲಕ ಪ್ರವೀಣ್, ಕಾರ್ಯತ್ತಡ್ಕ ಘಟಕ ಸಾಮಾಜಿಕ ಜಾಲತಾಣದ ಸುಮಂತ್ ಹಾಗೂ ಸದಸ್ಯರಾದ ಶರಣ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ರವಿವಾರದ ಲಾಕ್ ಡೌನ್ ವೇಳೆಯೂ ವಿಶ್ರಾಂತಿ ಪಡೆಯದ ಸಂಘಟನೆ ಸದಸ್ಯರು ಈ ಕುಟುಂಬಕ್ಕೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ