ಕರ್ನಾಟಕ

karnataka

ETV Bharat / state

ದೇಶಕ್ಕಾಗಿ ಮಡಿದವರಿಗೆ ಅವಮಾನ ಮಾಡಿದವರು ಅಧಿಕಾರ ಹಿಡಿದಿರೋದು ನೋವಿನ ಸಂಗತಿ: ರಮಾನಾಥ ರೈ - ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ

ದೇಶದಲ್ಲಿ ಅಧಿಕಾರಕ್ಕೆ ಬಂದು ಹೊರ ಹೋದವರು, ದೇಶಕ್ಕಾಗಿ ಮಡಿದವರು ಬಹಳಷ್ಟು ಮಂದಿ ಇದ್ದಾರೆ. ಅವರೆಲ್ಲರೂ ನಮ್ಮನ್ನಗಲಿದಾಗ ಎಷ್ಟು ನಷ್ಟವಾಗಿದೆಯೋ ಅದಕ್ಕಿಂತ ಎಷ್ಟೋ ಪಟ್ಟು ಅಧಿಕ ನಷ್ಟ ರಾಜೀವ್​ ಗಾಂಧಿಯವರು ಅಗಲಿದಾಗ ಆಗಿದೆ. ಅವರಿಗೆ ಪರ್ಯಾಯವಾಗಿರುವ ನಾಯಕತ್ವ ಅಷ್ಟು ಸುಲಭದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

rajeev-gandhi-birthday-celebration-at-mangalore
ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್​ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ

By

Published : May 21, 2020, 3:59 PM IST

Updated : May 21, 2020, 4:39 PM IST

ಮಂಗಳೂರು: ದೇಶಕ್ಕಾಗಿ ಪ್ರಾಣ ತೆತ್ತ ರಾಜೀವ ಗಾಂಧಿ, ಇಂದಿರಾ ಗಾಂಧಿ ಹಾಗೂ ಮಹಾತ್ಮಾಗಾಂಧಿಯವರನ್ನು ಅವಮಾನ ಮಾಡಿದವರು ಈಗಲೂ ದೇಶದ ಅಧಿಕಾರದ ಚುಕ್ಕಾಡಿ ಹಿಡಿದಿದ್ದಾರೆ ಎಂದು ಹೇಳಲು ಬಹಳಷ್ಟು ನೋವಾಗುತ್ತದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್​ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜೀವ್​ ಗಾಂಧಿಯವರು ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ದೆಹಲಿಯಲ್ಲಿ ನಡೆಯುತ್ತಿದ್ದ ಗಲಭೆಯನ್ನು ನಿಯಂತ್ರಣಕ್ಕೆ ತಂದರು ಎಂದರು.

ಆ ವ್ಯಕ್ತಿಗೆ ಪಂಚಾಯತ್ ಸದಸ್ಯನಾಗುವ ಯೋಗ್ಯತೆಯೂ ಇಲ್ಲ: ’’ಅಂದು ರಾಜಕೀಯ ಮುಖಂಡರೊಬ್ಬರು 'ನಾಥೂರಾಂ ಒಬ್ಬ ಗಾಂಧಿಯನ್ನು ಕೊಲೆ ಮಾಡಿದ್ದಾರೆ. ಆದರೆ ರಾಜೀವ್​ ಗಾಂಧಿ ಅದೆಷ್ಟೋ ಜನರನ್ನು ಕೊಲೆ ಮಾಡಿದ್ದಾರೆ'’ ಎಂದು ಹೇಳಿದ್ದರು ಎಂದ ಅವರು, ಆ ವ್ಯಕ್ತಿಗೆ ಮೂಲಭೂತವಾದ ತಿಳಿವಳಿಕೆಯ ಕೊರತೆ ಇದೆ. ಆ ವ್ಯಕ್ತಿಗೆ ಪಂಚಾಯತ್ ಸದಸ್ಯನಾಗುವ ಯೋಗ್ಯತೆಯೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

ದೇಶದಲ್ಲಿ ಅಧಿಕಾರಕ್ಕೆ ಬಂದು ಹೊರ ಹೋದವರು, ದೇಶಕ್ಕಾಗಿ ಮಡಿದವರು ಬಹಳಷ್ಟು ಮಂದಿ ಇದ್ದಾರೆ. ಅವರೆಲ್ಲರೂ ನಮ್ಮನ್ನಗಲಿದಾಗ ಎಷ್ಟು ನಷ್ಟವಾಗಿದೆಯೋ ಅದಕ್ಕಿಂತ ಎಷ್ಟೋ ಪಟ್ಟು ಅಧಿಕ ನಷ್ಟ ರಾಜೀವ್​ ಗಾಂಧಿಯವರು ಅಗಲಿದಾಗ ಆಗಿದೆ. ಅವರಿಗೆ ಪರ್ಯಾಯವಾಗಿರುವ ನಾಯಕತ್ವ ಅಷ್ಟು ಸುಲಭದಲ್ಲಿ ಸಿಗಲು ಸಾಧ್ಯವಿಲ್ಲ ಎಂದರು.

ರಾಜೀವ್​ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ
ಬಿಜೆಪಿ ದೇಶದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ:ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರು ದೇಶದಲ್ಲಿ 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿದ ಸಂದರ್ಭದಲ್ಲಿ ಇದು ದೇಶ ಬೆಳವಣಿಗೆಗೆ ಮಾರಕ, ಪ್ರಬುದ್ಧ ಮತದಾರರಿರಬೇಕು ಎಂದು ಬಿಜೆಪಿ ಟೀಕೆ ಮಾಡಿತ್ತು ಎಂದರು.

ಆದರೆ, ಇಂದು ಅದೇ ಬಿಜೆಪಿ ದೇಶದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇಶದ ಏಕತೆಯ ಬಗ್ಗೆ ಗುರುತ್ವವಾಗಿರುವಂತಹ ಚಿಂತನೆಗಳನ್ನು ಯುವಕರ ತಲೆಯೊಳಗೆ ಹಾಕಿ, ಕೋಮು ಚಿಂತನೆಗಳ ಬಗ್ಗೆ ಅವರಿಗೆ ಪಾಠ ಮಾಡಿ ದೇಶವನ್ನು ಛಿದ್ರ ಮಾಡುವಂತಹ ಸ್ಥಿತಿಗೆ ಬಿಜೆಪಿ ಕೊಂಡೊಯ್ಯುತ್ತಿರೋದು ದುರದೃಷ್ಟಕರ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಯ್ದೀನ್ ಬಾವಾ, ಕೋಡಿಜಾಲ್ ಇಬ್ರಾಹೀಂ, ಶಶಿಧರ್ ಹೆಗ್ಡೆ, ಶುಭೋದಯ ಆಳ್ವ, ಅನಿಲ್ ಡಿಸೋಜ, ಭಾಸ್ಕರ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.

Last Updated : May 21, 2020, 4:39 PM IST

ABOUT THE AUTHOR

...view details