ಸುಳ್ಯ (ದಕ್ಷಿಣ ಕನ್ನಡ):ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಕಾಸರಗೋಡು ತಾಲೂಕಿನ ಹಲವೆಡೆ ರೈಲು ಅಪಘಾತಕ್ಕೆ ಕಿಡಿಗೇಡಿಗಳು ಸಂಚು ರೂಪಿಸಿರುವುದು ತಿಳಿದು ಬಂದಿದೆ. ಇಲ್ಲಿನ ಕೋಟ್ಟಿಕುಳಂ ಸೇರಿದಂತೆ ಹಲವು ಕಡೆಗಳಲ್ಲಿ ದುಷ್ಕರ್ಮಿಗಳು ರೈಲ್ವೆ ಹಳಿಗಳಿಗೆ ಹಾನಿ ಮಾಡಲು ಯತ್ನಿಸಿರುವುದು ಪತ್ತೆಯಾಗಿದೆ.
ಸುಗಮ ರೈಲು ಸಂಚಾರಕ್ಕೆ ತೊಡಕು ಉಂಟುಮಾಡುವ ಉದ್ಧೇಶದಿಂದ ಹಳಿಗಳಿಗೆ ಕಲ್ಲು, ಕಾಂಕ್ರಿಟ್ ತುಂಡು ಕಬ್ಬಿಣದ ಬೀಮ್ ಅಡ್ಡ ಇಡಲಾಗಿದೆ. ಘಟನೆಯ ವಿಚಾರ ಬೆಳಕಿಗೆ ಬರುತ್ತಲೇ ಕೇರಳ ಪೊಲೀಸ್ ಇಲಾಖೆ ಹಾಗೂ ರೈಲ್ವೆ ಭದ್ರತಾ ಪಡೆಯು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಪೊಲೀಸರ ಜೊತೆಗೂಡಿ ತನಿಖೆ ಆರಂಭಿಸಿದ್ದಾರೆ.
ಕಳೆದೊಂದು ವಾರದ ಮಧ್ಯೆ ಕಾಸರಗೋಡಿನ ವಿವಿಧ ಕಡೆಗಳಲ್ಲಿ ಈ ರೀತಿಯ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಆಗಸ್ಟ್ 21ರಂದು ಭಾನುವಾರ ಕಾಸರಗೋಡು – ಕಾಂಞಗಾಡು ಮಧ್ಯೆ ಹಾದುಹೋಗುವ ಹಳಿಗಳಲ್ಲಿ ಕೋಟಿಕುಳಂ-ಬೇಕಲ ನಡುವೆ ಮೊದಲು ಈ ದುಷ್ಕೃತ್ಯ ನಡೆಸಲಾಗಿತ್ತು. ತೃಕ್ಕನ್ನಾಡ್ ದೇಗುಲದ ಹಿಂದೆ ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು, ಬೀಮ್ ಪತ್ತೆಯಾಗಿತ್ತು. ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಮತ್ತು ಕೇರಳ ಗಡಿಯ ಹಲವೆಡೆ ರೈಲ್ವೆ ಹಳಿಗೆ ಕಿಡಿಗೇಡಿಗಳಿಂದ ಹಾನಿ: ತೀವ್ರ ನಿಗಾ ಕುಂಬಳೆ ನಿಲ್ದಾಣದ ಬಳಿಯಲ್ಲೂ ರೈಲ್ವೆ ಹಳಿಗಳ ಮೇಲೆ ಕಲ್ಲುಗಳು ಪತ್ತೆಯಾಗಿತ್ತು. ಸುಮಾರು 35 ಕೆಜಿ ತೂಗುವ ಕಾಂಕ್ರೀಟ್ ತುಂಡೊಂದು ಪತ್ತೆಯಾಗಿದೆ. ಕಳೆದ ಶನಿವಾರ ಚಿಟ್ಟಾರಿ ಎಂಬಲ್ಲೂ ಕೊಯಂಬುತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲೆಸೆತ ನಡೆದಿದೆ. ಜೊತೆಗೆ ತೃಕ್ಕನ್ನಾಡ್, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ. ಮಂಗಳೂರು - ಚೆನ್ನೈ ಸೂಪರ್ ಫಾಸ್ಟ್ ರೈಲು ಸಂಚರಿಸುವ ರೈಲು ಮಾರ್ಗದಲ್ಲೂ ಕಲ್ಲುಗಳು ಪತ್ತೆಯಾಗಿವೆ ಎಂದು ಎನ್ನಲಾಗಿದೆ. ಹೀಗಾಗಿ ಸ್ಥಳಕ್ಕೆ ಉತ್ತರ ವಲಯ ರೈಲ್ವೆ ಪೊಲೀಸ್ ಡಿವೈಎಸ್ಪಿ ಕೆ.ಎನ್.ರಾಧಾಕೃಷ್ಣನ್ ಭೇಟಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕೂಡ ಇದೆ ರೀತಿಯ ಘಟನೆಗಳು ಈ ಕಡೆಗಳಲ್ಲಿ ವರದಿಯಾಗಿತ್ತು. ಕಾಸರಗೋಡು- ಮಂಗಳೂರು ಹಾದಿಯ ಮೊಗ್ರಾಲು ಪುತ್ತೂರು, ಆರಿಕ್ಕಾಡಿ, ಉಪ್ಪಳ ಮುಂತಾದ ಕಡೆಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದವು. ಅಂದು ಪೊಲೀಸರು, ರೈಲ್ವೆ ರಕ್ಷಣಾ ಪಡೆ, ಸ್ಥಳೀಯರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಈಗ ಮತ್ತೆ ಇಂತಹ ಕೃತ್ಯಗಳೇ ನಡೆದಿರುವುದು ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಕೈಗೊಂಡು ತೀವ್ರ ನಿಗಾ ವಹಿಸಿದ್ದಾರೆ.
ಇದನ್ನೂ ಓದಿ:12 ಕೋಟಿ ರೂ ಮೌಲ್ಯದ ಮೊಬೈಲ್ ಕದ್ದ ದರೋಡೆಕೋರರು.. ಸಿನಿಮೀಯ ರೀತಿ ಚೇಸ್ ಮಾಡಿದ ಪೊಲೀಸರು