ಕರ್ನಾಟಕ

karnataka

ETV Bharat / state

ಹೈನುಗಾರಿಕೆಯಲ್ಲಿ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾದ ಮಂಜಿನ ನಗರಿ!

1.2 ಎಕರೆ ವಿಶಾಲ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ ತಲೆ ಎತ್ತಿ ನಿಂತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉಪಕರಣಗಳ ಅಳವಡಿಕೆ ಶುರುವಾಗಿದೆ.

ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ

By

Published : May 22, 2019, 2:13 AM IST

ಮಡಿಕೇರಿ :ಕ್ರೀಡೆ, ಸೇನೆ, ಟೂರಿಸಂ ಮಾತ್ರವಲ್ಲದೆ ಹೈನುಗಾರಿಕೆಯಲ್ಲೂ ತಾನೇನು ಕಡಿಮೆ ಇಲ್ಲ ಎಂಬಂತಿರುವ ಪುಟ್ಟ ಜಿಲ್ಲೆ ಕೊಡಗು, ಸದ್ದಿಲ್ಲದೆ ಮತ್ತೊಂದು ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

ದಕ್ಷಿಣ ಭಾರತದಲ್ಲೇ ಜರ್ಸಿ ತಳಿ ಸಂವರ್ಧನಾ ಘಟಕ ಆರಂಭವಾಗೋದ್ರೊಂದಿಗೆ ಹೈನುಗಾರಿಯ ಜರ್ನಿ ಆರಂಭಿಸಿದ ಕೊಡಗಿಗೆ ಈಗ ಮತ್ತೊಂದು ಹೆಮ್ಮೆಯ ಗರಿ ಸೇರಿದೆ. ಕೆಲವೇ ತಿಂಗಳಲ್ಲಿ ಕೊಡಗಿನಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ ಕಾರ್ಯಾರಂಭ ಮಾಡಲಿದ್ದು, ಈ ಮೂಲಕ ಹೈನುಗಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ.

ಕೊಡಗು ಅಂದರೆ ಪ್ರವಾಸೋದ್ಯಮ, ಕ್ರೀಡೆ ಹಾಗೂ ಸೈನ್ಯ, ಕಾಫಿ ನೆನಪಾಗುತ್ತೆ. ಆದರೆ ಸದ್ಯ ಜಿಲ್ಲೆ ಅಷ್ಟಕ್ಕೆ ಸೀಮಿತವಾಗಿಲ್ಲ. ಕೊಡಗಿನಲ್ಲಿ ಜನ ಇತ್ತೀಚೆಗೆ ಹೈನುಗಾರಿಕೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಅಲ್ಲದೆ ಹೈನುಗಾರಿಕೆಗೆ ಪೂರಕವಾದ ವಾತಾವರಣ ಕೊಡಗಿನಲ್ಲಿ ಇರೋದು ಮತ್ತೊಂದು ವಿಶೇಷ. ಈ ಹಿನ್ನಲೆಯಲ್ಲಿ ಕೊಡಗಿನತ್ತ ಸೂಪರ್ ಸ್ಪೆಷಾಲಿಟಿ ಹೈನುಗಾರಿಕಾ ಪ್ರೋಜೆಕ್ಟ್ ಗಳು ಮುಖ ಮಾಡುತ್ತಿವೆ.

ಅದರಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸ್ತಿರೋ ದಕ್ಷಿಣ ಭಾರತದಲ್ಲೇ ಏಕೈಕ ಜರ್ಸಿ ತಳಿ ಸಂವರ್ಧನಾ ಘಟಕ ಕೂಡ ಸೇರಿದೆ. ಇದರ ಯಶಸ್ಸಿನ ಜೊತೆಗೆ ಮತ್ತೊಂದು ಅಂತಹದೇ ಒಂದು ಹೈನುಗಾರಿಕಾ ಘಟಕ ಕೊಡಗಿನಲ್ಲಿ ಕಾರ್ಯಾರಂಭ ಮಾಡಲು ಸಿದ್ಧವಾಗಿದೆ. ಅದೇ ಕರ್ನಾಟಕದ ಏಕೈಕ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಬಳಿಯ ಬ್ಯಾಡಗೊಟ್ಟ ಗ್ರಾಮದ 11.2 ಎಕರೆ ವಿಶಾಲ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ ತಲೆ ಎತ್ತಿ ನಿಂತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉಪಕರಣಗಳ ಅಳವಡಿಕೆ ಶುರುವಾಗಿದೆ. ಇದೇ ವೇಗದಲ್ಲಿ ಕಾಮಗಾರಿ ಪೂರ್ಣಗೊಂಡರೆ ಇನ್ನೇನು ಕೆಲವೇ ತಿಂಗಳಲ್ಲಿ ಈ ಘಟಕ ಲೋಕಾರ್ಪಣೆಗೊಳ್ಳಲಿದೆ.

2015ರಲ್ಲಿ 5 ಕೋಟಿ ವೆಚ್ಚದಲ್ಲಿ ಆರಂಭವಾದ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನೇನಿದ್ದರೂ ಉಪಕರಣಗಳ ಅಳವಡಿಕೆ ಕೆಲಸ ಮಾತ್ರ ಬಾಕಿ ಇದೆ. ಕೇಂದ್ರದಲ್ಲಿ ಈಗಾಗಲೇ 200 ಮೇಕೆ ಸಾಕಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ಜೊತೆಯಲ್ಲಿ ಮೇಕೆ ಹಾಲು ಸಂಗ್ರಹದ ಶಿಥಿಲೀಕರಣ ಘಟಕ ಕಾಮಗಾರಿ ನಡೆಯಬೇಕಾಗಿದೆ.

ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ

ಮೇಕೆಗಳಿಗೆ ಆಧುನಿಕ ಮಾದರಿ ಕೊಟ್ಟಿಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದಲ್ಲದೆ ಮೇಕೆಗಳಿಗೆ ಆಹಾರಕ್ಕೆ ಅಗತ್ಯವಾಗಿರುವ 50ಕ್ಕೂ ಅಧಿಕ ಜಾತಿಯ ಪೌಷ್ಠಿಕಾಂಶಯುಕ್ತ ಹೈಬ್ರಿಡ್ ಹುಲ್ಲನ್ನು 10 ಎಕರೆ ಪ್ರದೇಶದಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ.

ಕಾಡು ಪ್ರಾಣಿಗಳ ಹಾವಳಿ ತಡೆಗೆ ತಂತಿ ಬೇಲಿ:

11.2 ಎಕರೆ ಪ್ರದೇಶದ ಸುತ್ತಲು ತಂತಿಬೇಲಿ ನಿರ್ಮಿಸಲಾಗಿದೆ. ಅರಣ್ಯ ಪ್ರದೇಶ ಹತ್ತಿರದಲ್ಲಿಯೇ ಕೇಂದ್ರ ಇರುವುದರಿಂದ ಚಿರತೆ ಹಾವಳಿಯನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಘಟಕದಲ್ಲಿ ಆರಂಭಿಕವಾಗಿ 200 ಮೇಕೆಗಳನ್ನು ಸಾಕಿ, ಬಳಿಕ ರೈತರಿಗೆ ಮೇಕೆ ಸಾಕಲು ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಇದರ ಉಸ್ತುವಾರಿಯನ್ನ ಕೂಡಿಗೆಯಲ್ಲಿರೋ ಜರ್ಸಿ ತಳಿ ಸಂವರ್ಧನಾ ಕೇಂದ್ರವು ನೋಡಿಕೊಳ್ಳಲಿದೆ.

ರಾಜ್ಯದಲ್ಲೇ ಪ್ರಪ್ರಥಮ ಎನ್ನಲಾದ ಈ ಕೇಂದ್ರವು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿದೆ. ಯಂತ್ರೋಕರಣಗಳ ಅಳವಡಿಕೆ ಬಳಿಕ ಹೆಚ್ಚು ಹಾಲು ಕೊಡುವ ಮೇಕೆ ತಳಿಗಳನ್ನು ಹೊರ ರಾಜ್ಯ ಅಥವಾ ವಿದೇಶಗಳಿಂದ ತರಿಸಿಕೊಳ್ಳುವ ಪ್ಲಾನ್ ಕೂಡ ನಡೀತಿದೆ. ಎಲ್ಲವೂ ಅಂದುಕೊಂಡತೆ ನಡೆದು ಪ್ರಾಜೆಕ್ಟ್ ಸಕ್ಸಸ್ ಆದ್ರೆ ಕೊಡಗು ಹೈನುಗಾರಿಕೆಯಲ್ಲಿ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗೋದ್ರಲ್ಲಿ ಎರಡು ಮಾತಿಲ್ಲ.

ABOUT THE AUTHOR

...view details