ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ 'ಕ್ವಾರಂಟೈನ್ ವಾಚ್': ಜಿಲ್ಲಾಧಿಕಾರಿ - ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರ ರಾಜ್ಯ, ದೇಶಗಳಿಂದ ಬರುವವರ ಸಂಖ್ಯೆ ಅಧಿಕಗೊಳ್ಳುವ ನಿರೀಕ್ಷೆ ಇರುವ ಕಾರಣ ಕ್ವಾರಂಟೈನ್ ವಾಚ್ ಆ್ಯಪ್​ ಸಿದ್ಧಪಡಿಸಲಾಗಿದೆ.

Dakshina Kannada
ಜಿಲ್ಲಾಧಿಕಾರಿ ಸಿಂಧು ರೂಪೇಶ್

By

Published : Jun 6, 2020, 4:51 PM IST

ಬಂಟ್ವಾಳ:ಹೊರ ರಾಜ್ಯ, ಹೊರ ದೇಶಗಳಿಂದ ಮುಂದಿನ ದಿನಗಳಲ್ಲಿ ಬರುವವರ ಸಂಖ್ಯೆ ಜಾಸ್ತಿ ಆಗುವ ನಿರೀಕ್ಷೆ ಇದ್ದು, ತಂತ್ರಜ್ಞಾನ ಬಳಸಿಕೊಂಡು ಕ್ವಾರಂಟೈನ್ ವಾಚ್ ಆ್ಯಪ್​ ಸಿದ್ಧಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ಶನಿವಾರ ಹಲವು ಕಡೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಪಿಡಿಒ, ವಿಎಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ವಿವರ ನೀಡಿದರು. ಇನ್ಮುಂದೆ ಜಿಲ್ಲೆಗೆ ರೈಲು, ವಿಮಾನಗಳಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರ ಸಂಖ್ಯೆ ಅಧಿಕವಾಗಲಿದ್ದು, ಕ್ವಾರಂಟೈನ್ ಕಟ್ಟುನಿಟ್ಟಾಗಿ ಪಾಲಿಸಿದರೆ ತೊಂದರೆಯಾಗದು. ಈ ಹಿನ್ನೆಲೆಯಲ್ಲಿ ಗ್ರಾಮಮಟ್ಟದಲ್ಲಿಯೂ ಹೋಂ ಕ್ವಾರಂಟೈನ್ ಕಟ್ಟುನಿಟ್ಟಾಗಿ ಪಾಲಿಸಲು ತಂತ್ರಜ್ಞಾನ ಬಳಸಲಾಗುತ್ತದೆ. ತಾಲೂಕು ಮಟ್ಟದಲ್ಲಿ ಇದರ ಪರಿಶೀಲನೆ ನಡೆಸಲಾಗುವುದು. ಯಾರು ಹೋಂ ಕ್ವಾರಂಟೈನ್​ನಲ್ಲಿರುತ್ತಾರೋ ಆ ಪ್ರದೇಶ ಬಿಟ್ಟು ಹೊರಟರೆ ಅಲರ್ಟ್ ಸಂದೇಶ ಬರುವ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದವರು ಹೇಳಿದರು.

ಗ್ರಾಮಮಟ್ಟದಲ್ಲಿ ವಾರ್ಡ್ ಹಂತದಲ್ಲಿ ಈ ಕುರಿತು ವಿಭಾಗಗಳನ್ನು ಗುರುತಿಸಲಾಗಿದ್ದು, ಗ್ರಾಮ ಪಂಚಾಯತ್, ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಜವಾಬ್ದಾರಿ ವಹಿಸಲಾಗಿದೆ. ಹೋಂ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳ ಮನೆ ಗುರುತಿಸಿ ಪ್ರತಿನಿತ್ಯ ಆ ಮನೆಗೆ ಭೇಟಿ ನೀಡುವ ಆಶಾ ಕಾಯ್ಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಆ ವ್ಯಕ್ತಿ ಮನೆಯಲ್ಲಿಯೇ ಇರುವ ಕುರಿತು ದಾಖಲಾತಿ ಮಾಡಲಿದ್ದಾರೆ ಎಂದರು. ಬಂಟ್ವಾಳದಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ನಾವೂರು, ಅಮ್ಟೂರು ಹಾಗೂ ನೆಟ್ಲ ಮುಡ್ನೂರು ಗ್ರಾಮಗಳಲ್ಲಿ ಮನೆಗಳನ್ನು ಸೀಲ್​ ಡೌನ್ ಮಾಡಲಾಗಿದ್ದು, ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದರು.

ಜ್ವರ ಬಂದರೆ ಮಾಹಿತಿ ನೀಡಿ: ಡೆಂಘಿ, ಮಲೇರಿಯಾ ಬರುವ ಈ ಹೊತ್ತಿನಲ್ಲಿ ಜ್ವರ ಬರುವ ಸಂದರ್ಭ ಮಾಹಿತಿ ನೀಡಬೇಕು. ತಾಲೂಕಿನಲ್ಲಿ ಮೂರು ಜ್ವರ ತಪಾಸಣಾ ಕ್ಲಿನಿಕ್​​ಗಳಿವೆ. ಇವನ್ನು ಅಗತ್ಯ ಬಿದ್ದರೆ ಹೆಚ್ಚಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿಗಳು, ಕೋವಿಡ್ ಆತಂಕವಿರುವ ಹಿನ್ನೆಲೆಯಲ್ಲಿ ಅದರ ಪರೀಕ್ಷೆಯನ್ನೂ ಮಾಡಬೇಕಾಗುತ್ತದೆ ಎಂದರು.

ಹೆಲ್ತ್ ವಾಚ್:ಮನೆಯಲ್ಲಿರುವ ಪ್ರತಿಯೊಬ್ಬರ ಆರೋಗ್ಯದ ಕುರಿತಾಗಿ ವಿವರ ದಾಖಲಿಸುವ ಹೆಲ್ತ್ ವಾಚ್ ಸರ್ವೇ ಕಾರ್ಯ ಜಿಲ್ಲೆಯಲ್ಲಿ ನಡೆದಿದ್ದು, ಬಂಟ್ವಾಳದಲ್ಲಿ ಶೇ. 90ರಷ್ಟು ಸರ್ವೇ ಕಾರ್ಯ ನಡೆದಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರ ನೆರವಿನೊಂದಿಗೆ ಈ ಸಮೀಕ್ಷೆ ನಡೆಸಲಾಗಿದ್ದು, ಇದರ ಮೂಲಕ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ನೆರವಾಗುತ್ತದೆ ಎಂದರು.

ABOUT THE AUTHOR

...view details