ಮಂಗಳೂರು:ಮಂಗಳೂರಿನಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ವಿದ್ಯಾರ್ಥಿಗಳಿಬ್ಬರು ಹೆಬ್ಬಾವಿನೊಂದಿಗೆ ಸಾಹಸ ಮೆರೆದಿದ್ದಾರೆ.
ಮಂಗಳೂರಿನಲ್ಲಿ ಎರಡು ಪ್ರತ್ಯೇಕ ಘಟನೆ: ಹೆಬ್ಬಾವಿನೊಂದಿಗೆ ವಿದ್ಯಾರ್ಥಿಗಳ ಸಾಹಸ - student escued the python
ಒಂದು ಘಟನೆಯಲ್ಲಿ ಹೆಬ್ಬಾವಿನಿಂದ ಕಚ್ಚಿಸಿಕೊಂಡು ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾದರೆ, ಮತ್ತೊಂದು ಘಟನೆಯಲ್ಲಿ ಪ್ರಾಣಾಪಾಯದಲ್ಲಿದ್ದ ಹೆಬ್ಬಾವನ್ನು ವಿದ್ಯಾರ್ಥಿ ರಕ್ಷಿಸಿದ್ದಾನೆ.

ಮಂಗಳೂರಿನ ಮಣ್ಣಗುಡ್ಡೆ ಸಮೀಪ 10 ವರ್ಷದ ಬಾಲಕ ಸಂಕಲ್ಪ ಜಿ. ಪೈ ರಾತ್ರಿ 7 ಗಂಟೆಗೆ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹೆಬ್ಬಾವನ್ನು ಗೊತ್ತಿಲ್ಲದೆ ತುಳಿದಿದ್ದಾನೆ. ಇದರಿಂದ ಗಾಬರಿಗೊಂಡ ಹೆಬ್ಬಾವು ಬಾಲಕನ ಕಾಲಿಗೆ ಕಚ್ಚಿದೆ. ಹಾವು ಕಚ್ಚಿದ್ದರೂ ಧೃತಿಗೆಡದ ಬಾಲಕ ಹಾವಿನ ತಲೆಯನ್ನು ತುಳಿದು ನಿಂತಾಗ ಹಾವು ಸಮೀಪದಲ್ಲಿದ್ದ ಪೈಪ್ ಒಳಗೆ ಹೋಗಲು ಯತ್ನಿಸಿದೆ. ತಕ್ಷಣ ಸ್ಥಳೀಯರಿಗೆ ವಿಷಯ ತಿಳಿದು ಹೆಬ್ಬಾವನ್ನು ಹಿಡಿದಿದ್ದಾರೆ.
ಮತ್ತೊಂದು ಘಟನೆ ಅಕ್ಬೋಬರ್ 6 ರಂದು ಫಲ್ಗುಣಿ ನದಿ ಕಿನಾರೆಯಲ್ಲಿ ನಡೆದಿದೆ. ಮಂಗಳೂರಿನ ಅಶೋಕ ನಗರದ ದಂಬೆಲ್ ನಿವಾಸಿ ಭುವನ್ ತಮ್ಮ ಊರಿನ ಸಮೀಪ ಫಲ್ಗುಣಿ ನದಿಗೆ ಗೋಣಿಚೀಲದಲ್ಲಿ ಕಟ್ಟಿ ಎಸೆದು ಹೋದ ಹೆಬ್ಬಾವನ್ನು ರಕ್ಷಿಸಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿರುವ ಭುವನ್ ರಾಷ್ಟ್ರೀಯ ಪರಿಸರಾಸಕ್ತ ಒಕ್ಕೂಟದ ಸದಸ್ಯ. ಇವರಿಗೆ ಹೆಬ್ಬಾವನ್ನು ಗೋಣಿಚೀಲದಲ್ಲಿ ಕಟ್ಟಿ ಫಲ್ಗುಣಿ ನದಿಗೆ ಎಸೆಯಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಭುವನ್ ಗೆಳೆಯರ ಜೊತೆಗೆ ಆ ಪ್ರದೇಶಕ್ಕೆ ಹೋದರೂ ಯಾರೂ ಹೆಬ್ಬಾವನ್ನು ರಕ್ಷಿಸಲು ಧೈರ್ಯ ಮಾಡಿರಲಿಲ್ಲ. ಆದರೆ ಭುವನ್ ನದಿಗೆ ಇಳಿದು ಗೋಣಿಚೀಲ ಬದಿಗೆ ತಂದು ಹೆಬ್ಬಾವನ್ನು ರಕ್ಷಿಸಿದ್ದಾರೆ.