ಪುತ್ತೂರು: ಕೋವಿಡ್ ತಡೆಗಟ್ಟಲು ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸಲು ಮನವಿ ಮಾಡಿದ್ದರೂ ಕೂಡ ಜನರು ಹಿಂದೇಟು ಹಾಕುವುದನ್ನು ಗಮನಿಸಿ ಪುತ್ತೂರು ಪೇಟೆಯ ವಿವಿಧ ಕಡೆ ದಿಢೀರ್ ದಾಳಿ ನಡೆಸಿ ನಿಯಮಗಳ ಪಾಲನೆ ಮಾಡದಿರುವವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್‌ಗೆ ಸಂಬಂಧಿಸಿ ದ.ಕ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದು, ಅದರಂತೆ ಸಾರ್ವಜನಿಕರು ಮಾಸ್ಕ್ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ಡಾ. ಯತೀಶ್ ಉಳ್ಳಾಲ್, ಪುತ್ತೂರು ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಪುತ್ತೂರಿನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಟ್ಟೆ ಮಳಿಗೆಗಳಿಗೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದರು.