ಪುತ್ತೂರು (ದಕ್ಷಿಣ ಕನ್ನಡ):ನಾಳೆಯಿಂದ ಮನೆ ಮನೆಗಳಲ್ಲಿ, ವಠಾರಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಮೋದಕ ಪ್ರಿಯ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಲಿದೆ. ಈ ಹಿನ್ನೆಲೆ ಎಲ್ಲೆಡೆ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಇದರ ನಡುವೆ ಪುತ್ತೂರಿನಲ್ಲಿ ತಾರನಾಥ ಆಚಾರ್ಯ ಅವರು ತಯಾರಿಸುವ ಪರಿಸರ ಪ್ರೇಮಿ ವಿಗ್ರಹಗಳು ಕೂಡ ಖ್ಯಾತಿ ಪಡೆದಿವೆ.
ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಮಣ್ಣನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಕೇವಲ ಮಣ್ಣಲ್ಲದೆ ವಿಗ್ರಹಗಳಿಗೆ ರಾಸಾಯನಿಕವನ್ನು ಬಳಸದೆ ನೈಸರ್ಗಿಕ ಬಣ್ಣಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.
ಪುತ್ತೂರಿನ ಪರ್ಲಡ್ಕದ ತಾರನಾಥ ಆಚಾರ್ಯ ಅವರು ಕಳೆದ 73 ವರ್ಷಗಳಿಂದ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಇವರಿಗೆ ಕುಟುಂಬದ ಸದಸ್ಯರೂ ಕೈ ಜೋಡಿಸಿದ್ದರೆ, ಯುವಕರು ಸಹಾಯ ಮಾಡುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುವ ಈ ಯುವಕರು ಗಣೇಶನ ವಿಗ್ರಹ ತಯಾರಿಸುವ ಕಾಯಕದಲ್ಲೇ ಗಣೇಶನ ಸೇವೆ ನೆರವೇರಿಸಿಕೊಂಡು ಬರುತ್ತಿದ್ದಾರೆ.