ಪುತ್ತೂರು (ದಕ್ಷಿಣಕನ್ನಡ): ಕಳೆದ ಮೂರು ತಿಂಗಳ ಹಿಂದೆ ಪುತ್ತೂರಿಗೆ ವರ್ಗಾವಣೆಯಾಗಿ ಬಂದಿದ್ದ ತಹಶೀಲ್ದಾರ್ ರಮೇಶ್ ಬಾಬು ಅವರು, ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀರಿಗ ಮತ್ತು ಕುಂಬ್ರೊಗ ಎಂಬಲ್ಲಿ ಜನಶಿಕ್ಷಣ ಟ್ರಸ್ಟ್, ತಾಲೂಕು ಪತ್ರಕರ್ತರ ಸಂಘ ಮತ್ತು ಸೆಲ್ಕೂ ಸೋಲಾರ್ ಸಹಯೋಗದ ಯೋಜನೆಯಲ್ಲಿ ತನ್ನ ವೇತನದ ಒಂದಷ್ಟು ಹಣವನ್ನು ಬಡವರಿಗೆ ಮೀಸಲಿಟ್ಟು ಎರಡು ಮನೆಗೆ ಬೆಳಕು ನೀಡುವ ಕೆಲಸ ಮಾಡಿದ್ದಾರೆ.
ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ರಮೇಶ್ ಬಾಬು ಅವರು ತಾವೇ ಮುಂದೆ ನಿಂತು ಎರಡು ಕುಟುಂಬಗಳಿಗೆ ಸೋಲಾರ್ ದೀಪ ಅಳವಡಿಸಲು ಆರ್ಥಿಕ ನೆರವು ನೀಡಿದ್ದಲ್ಲದೆ, ಇಂದು ಸೋಲಾರ್ ದೀಪವನ್ನ ಉದ್ಘಾಟಿಸಿ ಎರಡು ಬಡ ಕುಟುಂಬಗಳಿಗೆ ಬೆಳಕು ನೀಡಿದ್ದಾರೆ.
ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಅವರು ಮಾತನಾಡಿ, ಪ್ರತಿ ಮನೆಯಲ್ಲೂ ಬೆಳಕು ಕಾಣಬೇಕು ಎಂಬುದು ನಮ್ಮ ಉದ್ದೇಶ. ತಹಶೀಲ್ದಾರ್ ರಮೇಶ್ ಬಾಬು ಅವರು ಎಲ್ಲರಿಗೂ ಮಾದರಿ ವ್ಯಕ್ತಿ. ಮುಂದಿನ ದಿನಗಳಲ್ಲಿ ಜನ ಶಿಕ್ಷಣ ಟ್ರಸ್ಟ್ ಮೂಲಕ ಮಳೆ ನೀರು ಕೊಯ್ಲು ಅಳವಡಿಸಿಕೊಡಲಾಗುವುದು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣಗೌಡ ಬೆಳ್ಳಿಪ್ಪಾಡಿ ಅವರು ಮಾತನಾಡಿ, ಒಬ್ಬ ಅಧಿಕಾರಿ ಯಾವ ರೀತಿ ಇದ್ದಾರೆ ಎಂಬುದು ಅವರ ಇಂತಹ ಸಾಮಾಜಿಕ ಚಟುವಟಿಕೆಯಿಂದ ತಿಳಿಯುತ್ತಿದೆ. ಇದು ಎಲ್ಲರಿಗೂ ಮಾದರಿಯಾಗಲಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅವರು ಮಾತನಾಡಿ, ಪುತ್ತೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಹಿಂದೆ ತಹಶೀಲ್ದಾರ್ ಆಗಿದ್ದ ಪುತ್ತೂರಿನ ಕೋಚಣ್ಣ ರೈ ಬಡವರಿಗೆ ನೆರವಾಗಿದ್ದರು. ಅಂತಹ ತಹಶೀಲ್ದಾರ್ ಮತ್ತೆ ಇದೀಗ ರಮೇಶ್ ಬಾಬು ರೂಪದಲ್ಲಿ ಬಂದಿದ್ದಾರೆ. ಯೋಜನೆಯ ಕುರಿತು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ ಬಡವರ ಮನೆಗೆ ಬೆಳಕು ಕೊಡುವ ಕೆಲಸ ಉತ್ತಮ ಯೋಜನೆ. ಅದನ್ನು ನಾನೇ ಮಾಡುತ್ತೇನೆ ಎಂದು ಮುಂದೆ ಬಂದರು ಎಂದು ಹೇಳಿದರು.