ಪುತ್ತೂರು (ಮಂಗಳೂರು): ದೇಶದಾದ್ಯಂತ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದೆ. ಸಾವುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಹೀಗೆ ಸಾವನ್ನಪ್ಪಿರುವ ರೋಗಿಗಳ ಶವ ಸಂಸ್ಕಾರ ನಡೆಸಲೂ ಮನೆಯವರು ಹಿಂದೇಟು ಹಾಕುವಂತಹ ಪರಿಸ್ಥಿತಿ ಸಹ ನಿರ್ಮಾಣವಾಗಿದೆ. ಇಂತಹ ಸಮಸ್ಯೆ ನಿವಾರಿಸಲೆಂದೇ ಪುತ್ತೂರಿನಲ್ಲಿ 30 ಸದಸ್ಯರ ತಂಡ ಮುಂದಾಗಿದ್ದು, ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ.
ಈ ತಂಡ ಈಗಾಗಲೇ 30 ಮೃತದೇಹಗಳ ಅಂತ್ಯ ಸಂಸ್ಕಾರವನ್ನು ಆಯಾ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ನೆರವೇರಿಸಿದೆ. ಪುತ್ತೂರಿಗೆ ಸಂಬಂಧಪಟ್ಟವರು ರಾಜ್ಯದ ಯಾವುದೇ ಭಾಗದಲ್ಲಿ ಕೋವಿಡ್ನಿಂದಾಗಿ ಮೃತಪಟ್ಟರೆ ಆ ಕುಟುಂಬ ಅಪೇಕ್ಷೆ ಪಟ್ಟಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಶಾಸಕರ ಕೊರೊನಾ ವಾರ್ ರೂಮ್ ತಂಡ ಅಂತ್ಯ ಸಂಸ್ಕಾರ ನಡೆಸುತ್ತದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಪುತ್ತೂರಿನ ನಿವಾಸಿಯೊಬ್ಬರು ಮೃತಪಟ್ಟ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಇದೇ ತಂಡವನ್ನು ಸಂಪರ್ಕಿಸಿ ಅಂತ್ಯ ಸಂಸ್ಕಾರ ನಡೆಸಲು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ರಾತ್ರಿ ವೇಳೆಯಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.