ಪುತ್ತೂರು: ಎರಡು ವರ್ಷಗಳಿಂದ ಕೋಣೆಯೊಳಗೆ ಬಂದಿಯಾಗದ್ದ ನಗರದ ಗಾಂಧಿ ಕಟ್ಟೆಯ ಗಾಂಧಿ ಪ್ರತಿಮೆ ಬಂಧ ಮುಕ್ತವಾಗಗುವ ಸಮಯ ಸನ್ನಿಹಿತವಾಗಿದೆ.
ನಗರದ ಹೃದಯ ಭಾಗದ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯನ್ನು 2018ರ ಮಾರ್ಚ್ 17ರಂದು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಈ ವೇಳೆ ಅಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದ ಕೊಠಡಿಯೊಳಗೆ ಇರಿಸಲಾಗಿತ್ತು. ಬಳಿಕ ಗಾಂಧಿ ಕಟ್ಟೆಯನ್ನು ಮರು ನಿರ್ಮಿಸಲು ನಗರಸಭೆ ಮುಂದಾಗಿತ್ತು. ಆದರೆ ಸ್ಥಳೀಯ ವ್ಯಕ್ತಿಯೊಬ್ಬರು ಹೈಕೋರ್ಟ್ ಮೂಲಕ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಗಾಂಧಿ ಕಟ್ಟೆ ಪುನರ್ ನಿರ್ಮಾಣ ಕಾಮಾಗಾರಿ ನನೆಗುದ್ದಿಗೆ ಬಿದ್ದಿತ್ತು. ಅಂತಿಮವಾಗಿ ಹೈಕೋರ್ಟ್ ನಗರಸಭೆ ಪರ ತೀರ್ಪು ನೀಡಿದ್ದರಿಂದ, ಕಳೆದು ತಿಂಗಳು ಮತ್ತೆ ಕಾಮಗಾರಿ ಪ್ರಾರಂಭಗೊಂಡು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಈ ತಿಂಗಳಾಂತ್ಯಕ್ಕೆ ನವೀಕೃತ ಗಾಂಧಿ ಕಟ್ಟೆಯ ಲೋಕಾರ್ಪಣೆ ನಡೆಯಲಿದೆ.
ತಿಂಗಳಾಂತ್ಯಕ್ಕೆ ಜಿಲ್ಲಾಧಿಕಾರಿ ಪುತ್ತೂರಿಗೆ ಆಗಮಿಸಲಿದ್ದು, ಈ ವೇಳೆ ಕಾಮಗಾರಿಯನ್ನು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ರಾಜ್ಯ ಅಥವಾ ಸ್ಥಳೀಯ ಹಿರಿಯ ನಾಯಕರ ಮೂಲಕ ಕಾಮಗಾರಿ ಲೋಕಾರ್ಪಣೆ ನಡೆಯಲಿದೆ. 8 ಲಕ್ಷ ರೂ. ವೆಚ್ಚದ ಈ ಕಾಮಗಾರಿಯೂ ಗಾಂಧಿ ಕಟ್ಟೆ, ಗಾಂಧಿ ಪ್ರತಿಮೆ ಜೊತೆಗೆ ಅಲ್ಲೇ ಇರುವ ಅಶ್ವಥ್ಧ ಮರದ ಸುತ್ತ ಕಟ್ಟೆಯನ್ನು ಕಟ್ಟುವುದು ಒಳಗೊಂಡಿದೆ. ಅಶ್ವಥ್ಥ ಮರಕ್ಕೆ ಹಾನಿಯಾಗದಂತೆ ಕಾಮಗಾರಿ ವೇಳೆ ಪೂರಕ ಕ್ರಮಕೈಗೊಳ್ಳಲಾಗಿದೆ.
ಸದ್ಯ ನವೀಕರಣಗೊಳ್ಳುತ್ತಿರುವ ಈ ಗಾಂಧಿ ಕಟ್ಟೆಗೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವ 1934ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಭೇಟಿ ನೀಡಿದ್ದ ವೇಳೆ ಈ ಸ್ಥಳದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದ್ದರು. ಹೀಗಾಗಿ 30 ವರ್ಷಗಳ ಹಿಂದೆ ಪುತ್ತೂರು ಗ್ರಾಮ ಪಂಚಾಯತ್ ಈ ಗಾಂಧಿಕಟ್ಟೆಯನ್ನು ನಿರ್ಮಿಸಿತ್ತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿ ವೇಳೆ ತಾತ್ಕಾಲಿಕವಾಗಿ ಈ ಗಾಂಧಿ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು.