ಪುತ್ತೂರು (ಮಂಗಳೂರು) :ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಶಾಸಕ ಸಂಜೀವ ಮಠಂದೂರು ವಾರ್ ರೂಮ್ ಮೂಲಕ ಸುಮಾರು 30 ಸಾವಿರ ಕುಟುಂಬಗಳಿಗೆ ಅಗತ್ಯವಸ್ತುಗಳ ಆಹಾರದ ಪೊಟ್ಟಣ ವಿತರಣೆ ಮಾಡಿದರು. ಕೊರೊನಾ ಸೋಂಕಿನಿಂದ ಪುತ್ತೂರು ಜನತೆ ಮುಕ್ತವಾಗಬೇಕೆಂಬ ನಿಟ್ಟಿನಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಆಯುರ್ವೇದಿಕ್ ಮಾತ್ರೆಗಳನ್ನು ಉಚಿತ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಪ್ರಥಮ ಹಂತದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯ 31 ವಾರ್ಡ್ಳಿಗೆ ಉಚಿತ ಮಾತ್ರೆಗಳ ವಿತರಣೆಗೆ ಜುಲೈ 20ರಂದು ಪುತ್ತೂರು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದ ಮತ್ತು ವಯಸ್ಕರಿರುವ ಮನೆಗಳಿಗೆ ತೆರಳಿ ಅಲ್ಲಿ ಅವರಿಗೆ ಮಾತ್ರೆಗಳನ್ನು ವಿತರಣೆ ಮಾಡಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದಿಕ್ ಮಾತ್ರೆಗಳ ಉಚಿತ ವಿತರಣೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಧಾನಿ ಸಂದೇಶ :ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಮತ್ತು ಸಂಶೋಧನಾ ಕೇಂದ್ರದ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಅವರ ಔಷಧ ಉತ್ಪಾದನಾ ಘಟಕದಲ್ಲಿ ಸಿದ್ದಗೊಂಡ ಆಯುಷ್ ಕ್ವಾತ ಮತ್ತು ಆರೋಗ್ಯ ರಕ್ಷಕ್ ಮಾತ್ರೆಗಳನ್ನು, ನಗರಸಭಾ ಸದಸ್ಯರ ಮೂಲಕ ನಗರಸಭೆಯ 31 ವಾರ್ಡ್ಗಳಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದ್ರು. ಬಳಿಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾದ ನಿಯಂತ್ರಣಕ್ಕೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಗೆ ಮಾರು ಹೋಗಬೇಕೆಂದಿದ್ದಾರೆ. ಅಂದರೆ ನಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಪ್ರಧಾನಿಯವರು ಸೂಚಿಸಿದ್ದು, ಇದಕ್ಕೆ ಪೂರಕ ಎಂಬಂತೆ ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳು ಏನು ಮಾಡಬೇಕೋ ಅದನ್ನು ನಾವು ಮಾಡಿದ್ದೇವೆ ಎಂದರು.
ನಗರಸಭೆ ಸದಸ್ಯರು ಮನೆ ಮನೆ ತೆರಳಿ ಆರ್ಥಿಕವಾಗಿ ಹಿಂದುಳಿದ, ವಯಸ್ಕರು, ಸಮಸ್ಯೆಯಲ್ಲಿರುವವರಿಗೆ ಈ ಮಾತ್ರೆ ವಿತರಣೆ ಮಾಡಬೇಕು. ಉಳಿದಂತೆ ಈ ಮಾತ್ರೆ ಮುಂದೆ ಎಲ್ಲಾ ಆಯುರ್ವೇದಿಕ್ ಔಷಧಿ ಅಂಗಡಿಗಳಲ್ಲಿ ಲಭ್ಯವಿದೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ ಎಂದು ಹೇಳಿದರು. ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ಮೂಲ ಉದ್ದೇಶವೇ ಜೀವ ಉಳಿಸುವುದು ಮತ್ತು ಆರೋಗ್ಯ ಕಾಪಾಡುವುದು ಎಂದರು.
ರೋಗ ನಿರೋಧಕ ಶಕ್ತಿ ವೃದ್ಧಿಗೆ ಧೈರ್ಯವಿರಬೇಕು :ಮಾತ್ರೆಗಳ ಉತ್ಪಾದನೆ ಮಾಡಿದ ಎಸ್‌ಡಿಪಿ ರೆಮಿಡೀಸ್ ಮತ್ತು ಸಂಶೋಧನಾ ಕೇಂದ್ರದ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಅವರು ಮಾತನಾಡಿ, ಕೋವಿಡ್-19ಗೆ ಹೆದರುವ ಅಗತ್ಯವಿಲ್ಲ. ಧೈರ್ಯ ಬಂದಾಗ ರೋಗ ನಿರೋಧಕ ಶಕ್ತಿ ತನ್ನಿಂದ ತಾನೆ ಹೆಚ್ಚುತ್ತದೆ. ಆಗಾಗ ಬಿಸಿ ನೀರು ಕುಡಿಯಿರಿ. ಬೆಳಗ್ಗೆ ಪ್ರಾಣಾಯಾಮ ಮಾಡಿ. ಇದರ ಜೊತೆಗೆ ರೋಗ ನಿರೋಧಕ ಮಾತ್ರೆ ತೆಗೆದುಕೊಳ್ಳಿ ಎಂದ ಅವರು, ಮಾತ್ರೆ ಸೇವಿಸುವ ವಿಧಾನದ ಕುರಿತು ವಿವರಿಸಿದರು.