ಕರ್ನಾಟಕ

karnataka

ETV Bharat / state

ಪುತ್ತೂರಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದ ಕೋಚಣ್ಣ ರೈ ನಿಧನ! - Kochanna Rai died

ಪುತ್ತೂರಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದ ಮಾಜಿ ತಹಶೀಲ್ದಾರ್ ಕೋಚಣ್ಣ ರೈ ಚಿಲ್ಮೆತ್ತಾರು ಮಂಗಳೂರಿನಲ್ಲಿಂದು ಮುಂಜಾನೆ ನಿಧನರಾಗಿದ್ದಾರೆ..

Puttur Former Tahashildar Kochanna Rai died today
ಕೋಚಣ್ಣ ರೈ ನಿಧನ

By

Published : Mar 27, 2022, 11:55 AM IST

ಪುತ್ತೂರು (ದಕ್ಷಿಣಕನ್ನಡ) :ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದ ಮಾಜಿ ತಹಶೀಲ್ದಾರ್ ಕೋಚಣ್ಣ ರೈ ಚಿಲ್ಮೆತ್ತಾರು (85) ಮಂಗಳೂರಿನಲ್ಲಿಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ (ವೈದ್ಯ) ಮನೆಯಲ್ಲಿದ್ದರು. ಆದ್ರೆ, ಇಂದು ಬೆಳಗ್ಗೆ ಪುತ್ರನ ಮನೆಯಲ್ಲಿಯೇ ನಿಧನ ಹೊಂದಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಚಿಲ್ಮೆತ್ತಾರು ನಿವಾಸಿಯಾಗಿರುವ ಕೋಚಣ್ಣ ರೈ 1980-81ರಲ್ಲಿ ಪುತ್ತೂರಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಹ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಹೆಗ್ಗಳಿಕೆಗೆ ಕೋಚಣ್ಣ ರೈ ಪಾತ್ರರಾಗಿದ್ದಾರೆ. ಅನೇಕ ದೀನ,ದಲಿತರಿಗೆ ಅತ್ಯಂತ ಸುಲಭವಾಗಿ ನಿವೇಶನದ ಹಕ್ಕು ಪತ್ರವನ್ನು ಕೊಡಿಸಿದ್ದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 14 ಎಕರೆ ಜಾಗವನ್ನು ತನ್ನ ವಿಶೇಷಾಧಿಕಾರದಿಂದ ನೀಡಿದ್ದಾರೆ. ಮೊಟ್ಟೆತ್ತಡ್ಕದಲ್ಲಿ ಗೇರು ಸಂಶೋಧನ ಕೇಂದ್ರಕ್ಕೆ 36 ಎಕರೆ ಜಾಗ, ಪುತ್ತೂರಿಗೆ ಬೈಪಾಸ್ ರಸ್ತೆಯ ಸೌಲಭ್ಯ, ಬಿರುಮಲೆ ಬೆಟ್ಟದ ಅಭಿವೃದ್ಧಿ ಸೇರಿದಂತೆ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ದಿಕ್ಕು ಕಲ್ಪಿಸಿ ಸಮಾಜದಲ್ಲಿ ಹೆಸರು ಗಳಿಸಿದ್ದರು.

1980ರ ದಶಕದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಸುಮಾರು 14 ಎಕರೆ ಜಮೀನು ಒಕ್ಕಲು ಮಸೂದೆ ಅನ್ವಯ ಹಿಂದು ಹಾಗೂ ಹಿಂದುಯೇತರ ಒಕ್ಕಲುದಾರರ ಕೈಯಲ್ಲಿದ್ದು ಪಾಳು ಬಿದ್ದಿತ್ತು. ಇವರು ಪುತ್ತೂರಿನ ತಹಶೀಲ್ದಾರರಾಗಿದ್ದ ಸಂದರ್ಭ ದೇವಸ್ಥಾನಕ್ಕೆ ಸಂಬಂಧಿಸಿದ ಈ 14 ಎಕರೆ ಜಮೀನನ್ನು ದೇವಸ್ಥಾನಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದರು. ಇಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲ ರಥಬೀದಿ, ಕಂಬಳಗದ್ದೆ ಸೇರಿದಂತೆ 14 ಎಕರೆ ಜಮೀನು ದೇವಸ್ಥಾನದ ಅಧೀನದಲ್ಲಿದೆ ಎಂದಾದರೆ ಇದಕ್ಕೆ ಮೂಲ ಕಾರಣ ಕೋಚಣ್ಣ ರೈಯವರ ಅಂದಿನ ದೃಢ ನಿರ್ಧಾರ.

ಪುತ್ತೂರಿನ ಅತಿ ಎತ್ತರ ಹಾಗೂ ಸುಂದರ ಪ್ರದೇಶ ಬಿರುಮಲೆ ಗುಡ್ಡ ನಿರಂತರ ಅತಿಕ್ರಮಣಗೊಳಗಾಗುತಿತ್ತು. ಇದನ್ನು ತಡೆದು ಸುಂದರ ಉದ್ಯಾನವನ, ಬೆಟ್ಟ ಅಭಿವೃದ್ಧಿಗೊಳಿಸಿ ಬಿರುಮಲೆ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿಸಲು ಶ್ರಮವಹಿಸಿದ್ದರು. ಮಾಣಿ-ಮೈಸೂರು ಹೆದ್ದಾರಿ ಹಾದು ಹೋಗುವ ಪುತ್ತೂರಿನ ಬೈಪಾಸ್ ರಸ್ತೆ ಕೋಚಣ್ಣ ರೈಗಳ ಕನಸಿನ ಕೂಸು. ಇಂದು ವಾಹನ ಸವಾರರು ಟ್ರಾಫಿಕ್ ಒತ್ತಡವಿಲ್ಲದೇ ಸಲೀಸಾಗಿ ಬೈಪಾಸ್ ಮೂಲಕ ಹೋಗುತ್ತಿದ್ದೇವೆಂದಾದರೆ ಅದಕ್ಕೆ ಕಾರಣ ಕೋಚಣ್ಣ ರೈಗಳು.

ಇದನ್ನೂ ಓದಿ:ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಭಯಪಡದೇ ಪರೀಕ್ಷೆ ಬರೆಯಿರಿ: ಸಿಎಂ ಬೊಮ್ಮಾಯಿ

ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನ ಕೇಂದ್ರಕ್ಕೆ ಅವರು 36 ಎಕರೆ ಜಾಗವನ್ನು ಒದಗಿಸುವ ಮೂಲಕ ಪುತ್ತೂರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೇಂದ್ರ ಸರ್ಕಾರದ ಈ ಸಂಸ್ಥೆ ಪುತ್ತೂರಿನಲ್ಲಿ ಕಾರ್ಯಾರಂಭಿಸುವ ಮೂಲಕ ಪುತ್ತೂರಿನ ಪ್ರತಿಷ್ಠೆ ಹೆಚ್ಚಿತು. ಈ ಕಾರಣಕ್ಕಾಗಿ ಪುತ್ತೂರು ನಿರ್ಮಾತೃ ಹಾಗೂ ಗಾಂಧಿವಾದಿ ಕೋಚಣ್ಣ ರೈ ಹೆಸರನ್ನು ದರ್ಬೆ ವೃತ್ತಕ್ಕೆ ನಾಮಕರಣ ಮಾಡುವಂತೆ ಸಮಾನಮನಸ್ಕರ ತಂಡವೊಂದು ಪುತ್ತೂರು ನಗರಸಭೆಗೆ ಶಿಫಾರಸು ಮಾಡಿತ್ತು. ಇನ್ನೂ ಪತ್ನಿ ದಿ. ಬೊಂಡಾಲಗುತ್ತು ಸುಗುಣ ರೈ ಮತ್ತು ಕೋಚಣ ರೈ ಅವರನ್ನು ವಿವಿಧ ಸಂಘ- ಸಂಸ್ಥೆಗಳು ಪ್ರಶಸ್ತಿ, ಬಿರುದು ನೀಡಿ ಗೌರವಿಸಿದೆ.

ABOUT THE AUTHOR

...view details