ಉಳ್ಳಾಲ (ಮಂಗಳೂರು):ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ಸಂಜೆ ನಡೆದಿದೆ. ದೆಹಲಿ ಮೂಲದ ಮಹಿಳೆ ಹತ್ಯೆಗೆ ಒಳಗಾದವರು. ಇವರ ಜತೆಗೆ ಇದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ , ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆ ಸಂಪರ್ಕಿಸಿ, ಹಮೀದ್ ಎಂಬುವವರ ಮನೆಯನ್ನು ಬಾಡಿಗೆ ಪಡೆದು ವಾಸವಿದ್ದರು. ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿ, ಇನ್ನೇನು ಬಟ್ಟೆಗಳು ಬರಬೇಕಿದೆ ಎನ್ನುತ್ತ ಮನೆಯಲ್ಲಿದ್ದರು.
ಆದರೆ ಗುರುವಾರ ಸಂಜೆ ವೇಳೆ ಇಬ್ಬರೂ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಯುವಕನೊಬ್ಬ ಅನುಮಾನಗೊಂಡು ನೋಡಿದ್ದಾನೆ. ಆ ಮನೆಯ ಶೌಚಾಲಯದೊಳಕ್ಕೆ ಮಹಿಳೆ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.
ಪುತ್ತೂರು ನಗರಸಭೆ ಸದಸ್ಯ ಆತ್ಮಹತ್ಯೆ- ಪುತ್ತೂರು:ಉಳ್ಳಾಲದಲ್ಲಿ ಈ ಕಥೆ ಆದರೆ,ನಗರಸಭೆ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಪುತ್ತೂರು ನಗರದ ಹೊರವಲಯದ ಸಾಲ್ಮರ ಸಮೀಪದ ಊರಮಾಲುದಲ್ಲಿ ಗುರುವಾರ ನಡೆದಿದೆ. ನಗರದ ಶಿವರಾಮ ಸಫಲ್ಯ(46) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಪುತ್ತೂರು ನಗರಸಭೆಯ 1ನೆ ವಾರ್ಡ್ನ ಸದಸ್ಯರಾಗಿದ್ದ ಶಿವರಾಮ, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ. ಅವರ ಪತ್ನಿಯು ಪತಿಯ ಮೊಬೈಲ್ ಗೆ ಕರೆ ಮಾಡಿದ್ದರೂ ಆ ಕರೆ ಸ್ವೀಕರಿಸಿಲ್ಲ, ತಕ್ಷಣ ಪಕ್ಕದ ಮನೆಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಯಲಿಗೆ ಬಂದಿದೆ. ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಮುಂದುವರಿಸಿದ್ದಾರೆ.