ಮಂಗಳೂರು: ನಗರದಲ್ಲಿ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಗೆ ಪಂಪ್ ವೆಲ್ ಸಂಪೂರ್ಣ ಜಲಾವೃತಗೊಂಡಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. 2 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಪಂಪ್ವೆಲ್ ಫ್ಲೈಓವರ್ ಅಡಿಭಾಗ ಸಂಪೂರ್ಣ ಜಲಾವೃತಗೊಂಡಿದೆ. ಎಡ ಬಿಡದೇ ಮಳೆ ಸುರಿಯುತ್ತಿದ್ದು, ಫ್ಲೈಓವರ್ ಅಡಿ ನಿಂತ ನೀರಿನಿಂದಾಗಿ ವಾಹನ ಸಂಚಾರಕ್ಕೆ ಭಾರೀ ತೊಂದರೆಯುಂಟಾಗಿದೆ. ಪರಿಣಾಮ ರಸ್ತೆ ಉದ್ದಕ್ಕೂ ವಾಹನಗಳು ನಿಲುಗಡೆಯಾಗಿ ಟ್ರಾಫಿಕ್ ಜಾಮ್ ಆಗಿದೆ.
ಮಂಗಳೂರಿನ ಪ್ರಮುಖ ಪ್ರದೇಶವಾಗಿರುವ ಪಂಪ್ವೆಲ್ ಬೆಂಗಳೂರು, ಕೇರಳ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಸ್ಥಳವಾಗಿದೆ. ಕೇರಳದಿಂದ ಗೋವಾ, ಮಹಾರಾಷ್ಟ್ರ, ಮಂಗಳೂರಿನಿಂದ ಬೆಂಗಳೂರು ತಲುಪಲು ಈ ರಸ್ತೆಯನ್ನು ಬಳಸಲಾಗುತ್ತದೆ.
ಭಾರಿ ಮಳೆಗೆ ಪಂಪ್ವೆಲ್ನ ಪ್ಲೈ ಓವರ್ ಕೆಳಭಾಗದ ರಸ್ತೆ ನೀರಿನಿಂದ ಜಲಾವೃತವಾಗಿದೆ. ಇಲ್ಲಿ ಫ್ಲೈ ಓವರ್ ನಿರ್ಮಾಣದ ಬಳಿಕ ಕೆಳಭಾಗದಲ್ಲಿ ನೀರು ನಿಂತು ಪ್ರತಿ ಬಾರಿಯೂ ಸಮಸ್ಯೆಯಾಗುತ್ತಿದೆ. ಪ್ಲೈ ಓವರ್ ನಿರ್ಮಾಣದ ವೇಳೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಬಿ ಸಿ ರೋಡ್ ಮತ್ತು ಹಂಪನಕಟ್ಟೆ ಮಧ್ಯೆ ಸಂಚರಿಸುವ, ತಲಪಾಡಿ ಮತ್ತು ಹಂಪನಕಟ್ಟೆ ಸಂಪರ್ಕಿಸುವ, ನಂತೂರು ಮತ್ತು ಪಂಪ್ ವೆಲ್ ನಡುವೆ ಮೇಲ್ಸೇತುವೆಯ ಕೆಳಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಭಾರಿ ಮಳೆ, ರಸ್ತೆ ಸಂಚಾರ ಅಸ್ತವ್ಯಸ್ತ: ಇನ್ನೊಂದೆಡೆ ದಾವಣಗೆರೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ದಾವಣಗೆರೆ ನಗರದಲ್ಲಿಂದು ಸುರಿದ ಧಾರಾಕಾರ ಮಳೆಯಿಂದ ಇಡೀ ನಗರ ಜೀವನ ಅಸ್ತವ್ಯಸ್ತಗೊಂಡಿತ್ತು.