ಬಂಟ್ವಾಳ (ದಕ್ಷಿಣಕನ್ನಡ): ಪಿಯುಸಿ ಫಲಿತಾಂಶ ಬಂದಾಗ ಫೇಲ್ ಆಗಿದ್ದ ತಾಲೂಕಿನ ಕೋಡಪದವು ನಿವಾಸಿ ಚಾಂದಿನಿ ಎಂಬ ವಿದ್ಯಾರ್ಥಿನಿ ಇದೀಗ ಮರು ಮೌಲ್ಯಮಾಪನದಲ್ಲಿ ಉತ್ತೀರ್ಣ ಆಗಿದ್ದಾಳೆ.
ಪಿಯು ಇಲಾಖೆ ಸಿಬ್ಬಂದಿ ಎಡವಟ್ಟು: ಫೇಲ್ ಆಗಿದ್ದ ವಿದ್ಯಾರ್ಥಿನಿ ಈಗ ಪಾಸ್! - Failing student now pass
ಕಳೆದ ತಿಂಗಳು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಫೇಲ್ ಎಂದು ಬಂದಿದ್ದರಿಂದ ಅಘಾತಕ್ಕೊಳಗಾಗಿದ್ದ ಚಾಂದಿನಿ ಎಂಬ ವಿದ್ಯಾರ್ಥಿನಿ, ಇದೀಗ ಮರುಮೌಲ್ಯ ಮಾಪನದಲ್ಲಿ ಬಂದ ಅಂಕ ನೋಡಿ ಸಂತಸಗೊಂಡಿದ್ದಾಳೆ.

ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಚಾಂದಿನಿಗೆ ಮರು ಮೌಲ್ಯಮಾಪನ ವೇಳೆ ಇಂಗ್ಲಿಷ್ನಲ್ಲಿ 83 ಅಂಕ ಬಂದಿವೆ. ಕಳೆದ ತಿಂಗಳು ಫಲಿತಾಂಶ ಘೋಷಣೆಯಾದಾಗ ಆಕೆಗೆ ದೊರಕಿದ್ದ ಅಂಕ ಕೇವಲ 13. ವಿಟ್ಲ ಸಮೀಪದ ಕೋಡಪದವು ಶ್ರೀಧರ ಭಟ್ ಕುಕ್ಕೆಮನೆ ಅವರ ಪುತ್ರಿ ಚಾಂದಿನಿ ರಿಸಲ್ಟ್ನಲ್ಲಿ ಅನುತ್ತೀರ್ಣರಾಗಿದ್ದಾರೆಂದು ತಿಳಿಸಲಾಗಿತ್ತು.
ಫೇಲ್ ಆಗುವ ವಿದ್ಯಾರ್ಥಿನಿಯಲ್ಲವೆಂದು ಮನೆಯವರಿಗೂ ಆಕೆಯ ವಿದ್ಯಾ ಸಂಸ್ಥೆಗೂ ಭರವಸೆ ಇತ್ತು. ಮನೆಯವರೆಲ್ಲರೂ ಸೇರಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕೋಣ ಎಂದು ಆಕೆಯನ್ನು ಸಂತೈಸಿದರು. ಅದರಂತೆ ಆಕೆಯ ಹೆತ್ತವರು ಸ್ಕ್ಯಾನ್ ಪ್ರತಿ ಪಡೆಯಲು 530 ರೂ. ಪಾವತಿಸಿ, ಉತ್ತರ ಪತ್ರಿಕೆಯನ್ನು ತರಿಸಿದರು. ಉತ್ತರ ಪತ್ರಿಕೆ ಬಂದು ತಲುಪಿದ್ದಂತೆ ವಿಚಿತ್ರ ಎನಿಸಿತ್ತು. ಪ್ರಥಮ ಪುಟದಲ್ಲೇ ಆಕೆಗೆ ಅಂಕ 83 ಎಂದು ನಮೂದಿಸಲಾಗಿತ್ತು. ದಾಖಲಿಸುವ ವೇಳೆ ಇಲಾಖೆಯ ಸಿಬ್ಬಂದಿ ಎಡವಟ್ಟು ಮಾಡಿರುವುದು ಗೊತ್ತಾಗಿತ್ತು.