ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ 7 ನೇ ಆರ್ಥಿಕ ಗಣತಿ ಆರಂಭವಾಗಿದ್ದು, ಮೂರು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ ನಡೆಯಲಿರುವ ಗಣತಿಯಲ್ಲಿ ಸಂಘಟಿತ ಹಾಗೂ ಅಸಂಘಟಿತ ಆರ್ಥಿಕ ವಲಯಗಳ ಬಗ್ಗೆ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರವಾದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್ಥಿಕ ಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತೀ 5 ವರ್ಷಕೊಮ್ಮೆ ಈ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಆರ್ಥಿಕ ಗಣತಿಯಲ್ಲಿ ನಗರ ಮತ್ತು ಗ್ರಾಮೀಣ ಸೇರಿದಂತೆ ಜಿಲ್ಲೆಯ ಭೌಗೋಳಿಕ ಗಡಿಯೊಳಗೆ ನೆಲೆಗೊಂಡಿರುವ ಎಲ್ಲಾ ಉದ್ದಿಮೆಗಳ, ಘಟಕಗಳಲ್ಲಿ ಜರುಗುತ್ತಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಸಂಗ್ರಹಿಸಲಾಗುತ್ತದೆ. ಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಯೋಜನೆಗಳನ್ನು ರೂಪಿಸುವ ಉದ್ದೇಶಕ್ಕೆ ಮತ್ತು ವಿವಿಧ ವಲಯಗಳಿಂದ ಆರ್ಥಿಕತೆಗೆ ದೊರಕುವ ಕೊಡುಗೆಗಳನ್ನು ಅಂದಾಜಿಸಲು ಉಪಯೋಗಿಸಲಾಗುವುದೆಂದು ಹೇಳಿದರು.
ಇದೇ ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ 2012-13 ರ ಸಾಲಿನಲ್ಲಿ ನಡೆದ 6ನೇ ಆರ್ಥಿಕ ಗಣತಿ ಕಾರ್ಯದಲ್ಲಿ ಒಟ್ಟು 2,25,639 ಉದ್ದಿಮೆಗಳಿದ್ದು ಇದರಲ್ಲಿ 60,239 ಸ್ಥಿರ ವಾಣಿಜ್ಯ ಉದ್ದಿಮೆಗಳು, 20,178 ಕಟ್ಟಡದ ಹೊರಗೆ ಸ್ಥಿರವಲ್ಲದ ಉದ್ದಿಮೆಗಳು, 1,45,222 ಕಟ್ಟಡದ ಒಳಗಿನ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ತಿಳಿಸಿದರು.