ಮಂಗಳೂರು :ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆ್ಯಂಟನಿ ವೇಸ್ಟ್ ಕಾರ್ಮಿಕರು ಮುಷ್ಕರ ಹೂಡಿರುವ ಪರಿಣಾಮ ಇಂದು ಮಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ನಡೆಯಲಿಲ್ಲ. ಆ್ಯಂಟನಿ ವೇಸ್ಟ್ನ ಎಲ್ಲ ಕಾರ್ಮಿಕರು ಇಂದು ನಗರದಲ್ಲಿ ತ್ಯಾಜ್ಯ ವಿಲೇವಾರಿ ನಡೆಸದೇ ಬೈಕಂಪಾಡಿಯ ಆ್ಯಂಟನಿ ವೇಸ್ಟ್ ಕಚೇರಿಯ ಬಳಿ ಮುಷ್ಕರ ನಡೆಸಿದ್ದಾರೆ.
ಈ ಬಗ್ಗೆ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಮಾತನಾಡಿ, ಡಿಸೆಂಬರ್ 17ರಂದು ನಮ್ಮ ಬೇಡಿಕೆಗಳನ್ನು ಪೂರೈಸಬೇಕು ಎಂದು ಪ್ರತಿಭಟನೆ ನಡೆಸಲಾಗಿತ್ತು.
ಈ ಸಂದರ್ಭ ಸಲ್ಲಿಸಿರುವ ಬೇಡಿಕೆಗಳಲ್ಲಿ ಒಂದು ಬೇಡಿಕೆಯನ್ನು ಮಾತ್ರ ಈಡೇರಿಸಲಾಗಿದೆ. ಉಳಿದವುಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ದಿನದ ಕೆಲಸದ ಅವಧಿಯನ್ನು ಎಂಟು ಗಂಟೆಗೆ ನಿಗದಿಪಡಿಸಬೇಕು. ಹೆಚ್ಚುವರಿ ಕೆಲಸಕ್ಕೆ ಓಟಿ, ಕಾರ್ಮಿಕರ ವಿರುದ್ಧ ದಬ್ಬಾಳಿಕೆ ಮಾಡಿರುವ ಸೂಪರ್ ವೈಸರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಭವಿಷ್ಯನಿಧಿ, ಇಎಸ್ಐ ತಕ್ಷಣ ಜಾರಿಗೆ ಬರಬೇಕು.
ವೇತನ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಇಡುವುದು ಸೇರಿದಂತೆ 12 ಬೇಡಿಕೆಗಳನ್ನು ಇಟ್ಟಿದ್ದೆವು. ಆದರೆ, ಈವರೆಗೆ ಒಂದು ಬೇಡಿಕೆ ಮಾತ್ರ ಈಡೇರಿಸಲಾಗಿದೆ. ಆದ್ದರಿಂದ ಇಂದು ಮತ್ತೆ ಮುಷ್ಕರ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳು ಇಂದು ಈಡೇರದಿದ್ದಲ್ಲಿ ಮುಷ್ಕರವನ್ನು ಮುಂದುವರಿಸುತ್ತೇವೆ ಎಂದು ನಾರಾಯಣ ಶೆಟ್ಟಿ ಹೇಳಿದರು.