ಬಂಟ್ವಾಳ: ತಾಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಲ್ನಡಿಗೆ ಜಾಥಾ ಮತ್ತು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಭಯ ಬ್ಲಾಕ್ಗಳ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಜಾಥಾ ಮತ್ತು ಧರಣಿ ಸತ್ಯಾಗ್ರಹ ನಡೆಸಲಾಯಿತು.
ತೈಲ ಬೆಲೆ ಏರಿಕೆ ವಿರುದ್ಧ ಬಂಟ್ವಾಳದಲ್ಲಿ ವಿಭಿನ್ನ ಪ್ರತಿಭಟನೆ ಜಾಥಾದ ವೇಳೆ ಕತ್ತೆಗಳ ಮೇಲೆ ವಸ್ತುಗಳನ್ನು ಹೇರಿ ಪ್ರತಿಭಟಿಸಿದರೆ, ಸ್ವತಃ ರೈ ಅವರೇ ಎತ್ತಿನಗಾಡಿಗೆ ನೊಗ ಕೊಟ್ಟು ನಡೆದಿದ್ದು ಎಲ್ಲರ ಗಮನ ಸೆಳೆಯಿತು. ಕಟ್ಟಿಗೆಯ ಒಲೆಯಲ್ಲಿ ಮಹಿಳಾ ಕಾಂಗ್ರೆಸ್ ಪ್ರಮುಖರಾದ ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಗಂಜಿಯೂಟ ತಯಾರಿಸಿ ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ತಿಳಿಯಪಡಿಸುವ ಕಾರ್ಯ ನಡೆಯಿತು.
ಓದಿ:ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ.. ಏನಿರಲಿದೆ 'ಚರ್ಚಾ' ವಿಷಯ?
ಇದೇ ವೇಳೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಧೀರ್ ಕುಮಾರ್ ಮುರೊಳ್ಳಿ, ಇಂದು ಮತ್ತೆ ಗ್ಯಾಸ್ ಬೆಲೆ 25 ರೂ ಜಾಸ್ತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಕಳಚುವ ಕಾರ್ಯ ಕಾಂಗ್ರೆಸ್ನಿಂದ ಆಗುತ್ತಿದೆ. ಮೋದಿ ಭಕ್ತರು ಈಗ ಹೇಳಲೂ ಆಗದೆ, ಮೌನಾಚರಣೆಯಲ್ಲಿ ತೊಡಗಿದ್ದಾರೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸಿದರು.