ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಅನ್ನು ದುರುಪಯೋಗಪಡಿಸಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿವೆ. ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಲ್ಲಿ ಮೀಟರ್ ರೀಡರ್ ಆಗಿ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಬೀದಿಪಾಲು ಮಾಡಲು ಹೊರಟಿರುವುದು ಖಂಡನೀಯ ಎಂದು ಸಿಐಟಿಯ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಆರೋಪಿಸಿದ್ದಾರೆ.
ಗುತ್ತಿಗೆ ಆಧಾರಿತ ಮೀಟರ್ ರೀಡರ್ಗಳನ್ನು ಕೆಲಸದಿಂದ ಕೈಬಿಡುವ ತೀರ್ಮಾನದ ವಿರುದ್ಧ ಮೆಸ್ಕಾಂ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ವಸಂತ ಆಚಾರಿ, ಈಗಾಗಲೇ ಸರ್ಕಾರಿ ಸ್ವಾಮ್ಯದ ರೈಲ್ವೆ, ವಿಮಾನ ನಿಲ್ದಾಣ, ಬಿಎಸ್ಎನ್ಎಲ್, ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಅನೇಕ ಸಂಸ್ಥೆಗಳ ಆಯ್ದ ವಿಭಾಗದಲ್ಲಿ ಖಾಸಗೀಕರಣಕ್ಕೆ ಅವಕಾಶ ನೀಡಲಾಗಿದೆ. ಇದೀಗ ವಿದ್ಯುತ್ ಕ್ಷೇತ್ರದಲ್ಲೂ ಖಾಸಗೀಕರಣ ನೀತಿಗಳನ್ನು ಜಾರಿಗೆ ತರುವ ಉದ್ದೇಶದಿಂದ ವಿವಾದಿತ ವಿದ್ಯುತ್ ಮಸೂದೆ ಜಾರಿಗೆ ರಾಜ್ಯ ಸರ್ಕಾರ ಯತ್ನಿಸುತ್ತಿದೆ. ಇದರ ಪರಿಣಾಮ ಗುತ್ತಿಗೆ ಆಧಾರಿತ ಮೀಟರ್ ಮಾಪಕರನ್ನು ಕೆಲಸದಿಂದ ಕೈಬಿಟ್ಟು, ಹೆಚ್ಚು ದುಡಿಗೆ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹಿಂದುತ್ವದ ಅಜೆಂಡಾ ಮುಂದಿಟ್ಟುಕೊಂಡು ಗೆದ್ದಿರುವ ಶಾಸಕ, ಸಂಸದರು ಮೆಸ್ಕಾಂ ನೌಕರರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಹಿಂದೂಗಳು ನಾವೆಲ್ಲರೂ ಒಂದು ಎಂದು ಹೇಳುತ್ತಾರೆ. ಈಗಿರುವ ಗುತ್ತಿಗೆ ನೌಕರರನ್ನು ಕೈಬಿಟ್ಟಲ್ಲಿ ರಾಜ್ಯದಾದ್ಯಂತ ಸಿಐಟಿಯು ಹೋರಾಟಕ್ಕೆ ಕರೆ ನೀಡುತ್ತದೆ ಎಂದು ಎಚ್ಚರಿಸಿದರು.