ಮಂಗಳೂರು :ರೈತರನ್ನು ಬೆಂಬಲಿಸಿ ಕರ್ನಾಟಕ ಬಂದ್ ಹಿನ್ನೆಲೆ ಮಂಗಳೂರಿನಲ್ಲಿ ರೈತ ಸಂಘಟನೆ, ಕಾಂಗ್ರೆಸ್, ಸಿಪಿಐಎಂ, ಜೆಡಿಎಸ್, ಜನವಾದಿ ಮಹಿಳಾ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಕಾರ್ಮಿಕ ಸಂಘಟನೆಗಳಿಂದ ಜಂಟಿಯಾಗಿ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವಿವಿಧ ಸಂಘಟನೆಗಳಿಂದ ಮಂಗಳೂರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ.. ಪ್ರತಿಭಟನೆ ಉದ್ದೇಶಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಹೊಸ ತಿದ್ದುಪಡಿ ಕಾಯ್ದೆಯ ಮೂಲಕ ರೈತರ ಫಸಲನ್ನು ಯಾರು, ಎಲ್ಲಿಯೂ ಮಾರಾಟ ಮಾಡಬಹುದು. ಎಪಿಎಂಸಿಯಲ್ಲಿಯೇ ಮಾರಾಟ ಮಾಡುವ ಅವಶ್ಯಕತೆ ಇಲ್ಲ. ಈ ಮೂಲಕ ಯಾರಲ್ಲಿ ಹಣವಿದೆ, ಅವರು ಸ್ವತಃ ಮಾರುಕಟ್ಟೆಯನ್ನೇ ತೆರೆಯಬಹುದು. ಹಾಗಾದಲ್ಲಿ ಬಡ ರೈತನಿಗೆ ತನ್ನ ಬೆಳೆಗೆ ಎಲ್ಲಿ ಬೆಲೆ ಸಿಗುತ್ತದೆ.
ಈ ಮೂಲಕ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಾದ ಅಂಬಾನಿ, ಅದಾನಿ, ರಿಲಯನ್ಸ್ಗಳಿಗೆ ಹಣ ಮಾಡಲು ದಾರಿ ಮಾಡಿ ಕೊಡುತ್ತಿದೆ. ಜೊತೆಗೆ ರೈತರನ್ನು ಈ ಕಂಪನಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ದ.ಕ ಜಿಲ್ಲೆಯಲ್ಲಿ ಒಂದು ಕ್ವಿಂಟಾಲ್ ಭತ್ತ ಬೆಳೆಯಲು ಇಂದು ತಗಲುವ ವೆಚ್ಚ ₹2,000. ಆದರೆ, ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ₹1,800. ಆ ಬಳಿಕ ರೈತರು ಮಾರುಕಟ್ಟೆಗೆ ತಾನು ಬೆಳೆದ ಬೆಳೆ ಕೊಂಡೊಯ್ದು ಮಾರಾಟ ಮಾಡಬೇಕು.
ಏಜೆಂಟ್ಗೆ ಕಮಿಷನ್ ನೀಡಬೇಕು. ಅವನ ಜೀವನವೂ ಸಾಗಿಸಬೇಕು. ಇದುವೇ ನಿಮ್ಮ ನೀತಿ. ಬಿಜೆಪಿಯ ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಿಗೆ ಎಷ್ಟು ರೈತ ಪರ ಕಾಳಜಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ರೈತ ವಿರೋಧಿ ಕಾನೂನನ್ನು ಜಾರಿಗೆ ತರುವ ಇವರ ಅಧಿಕಾರ ಉಳಿಯೋದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಶತಸಿದ್ಧ ಎಂದು ಐವನ್ ಡಿಸೋಜ ಹೇಳಿದರು.