ಕಡಬ:ಐತ್ತೂರು ಗ್ರಾಮದ ಮೂಜುರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ರಾತ್ರೋರಾತ್ರಿ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಗ್ರಹಿಸಿ ಕಡಬ ತಹಶೀಲ್ ಕಚೇರಿ ಎದುರು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸತ್ಯಾಗ್ರಹದಲ್ಲಿ ಪ್ರಸಾದ್ ತಂದೆ ಪದ್ಮಯ್ಯ ಗೌಡ, ತಾಯಿ ಸೀತಮ್ಮ, ಪತ್ನಿ ದೀಕ್ಷಿತಾ, ಅಣ್ಣ, ಅತ್ತಿಗೆ, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದಾರೆ. ಉಪವಾಸ ಆರಂಭಿಸಿ ಮೂರು ದಿನಗಳು ಕಳೆದಿವೆ. ಈ ವೇಳೆ, ನಿನ್ನೆ ಪ್ರಸಾದ್ ಅವರ ತಾಯಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಸೀತಮ್ಮನವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಸ್ವಲ್ಪ ಚೇತರಿಸಿಕೊಂಡ ಬಳಿಕ ಅವರು ಮತ್ತೆ ಮನೆಗೆ ತೆರಳದೆ ಮತ್ತೆ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು.
ನಂತರ ನೀತಿ ಅಧ್ಯಕ್ಷ ಜಯನ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಲು ಸರ್ಕಾರಿ ವೈದ್ಯರು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ಇದೀಗ ಉಪವಾಸದಲ್ಲಿ ನಿರತರಾಗಿರುವ ಮೂವರ ಸ್ಥಿತಿ ಚಿಂತಾಜನಕವಾಗಿದೆ.ಇಲ್ಲಿಯವರೆಗೆ ಪುತ್ತೂರು ಉಪ ಆಯುಕ್ತರು, ಕಡಬ ತಹಶೀಲ್ದಾರ್ ಹಾಗೂ ಕಡಬ ಠಾಣಾಧಿಕಾರಿ ಹೊರತು ಪಡಿಸಿ ಯಾವುದೇ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿಲ್ಲ. ಸ್ಥಳಕ್ಕೆ ಪುತ್ತೂರು ಎ.ಸಿ.ಯತೀಶ್ ಉಳ್ಳಾಲ್, ಕಡಬ ತಹಶೀಲ್ದಾರ್ ಹಾಗೂ ಕಡಬ ಠಾಣಾಧಿಕಾರಿ ಆಗಮಿಸಿ ಉಪವಾಸ ನಿರತರ ಮನ ಒಲಿಸುವ ಪ್ರಯತ್ನ ಮಾಡಿದರಾದರೂ ಅದಕ್ಕೆ ಒಪ್ಪದ ಸತ್ಯಾಗ್ರಹ ನಿರತರು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗುವ ತನಕ ಸತ್ಯಾಗ್ರಹ ಮುಂದುವರೆಸಿದ್ದಾರೆ.