ಪುತ್ತೂರು: ಬಡ ನಾಲ್ಕು ಮನೆಗಳಿಗೆ ಅನಾದಿ ಕಾಲದಿಂದಲೂ ಓಡಾಡುವ 6 ಅಡಿ ಅಗಲದ ರಸ್ತೆಯನ್ನು ಸ್ಥಳೀಯರೊಬ್ಬರು ಹೊಂಡ ತೆಗೆದು ರಸ್ತೆ ಬಂದ್ ಮಾಡಿ, ಕುಡಿಯುವ ನೀರಿಗೂ ತೊಂದರೆ ನೀಡಿದ್ದಾರೆ.
ನಮಗೆ ನಡೆದು ಹೋಗಲು ರಸ್ತೆ ಕೊಡಿ, ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿ ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಪರಿಶಿಷ್ಟ ಪಂಗಡದ ನಾಲ್ಕು ಮನೆಗಳ ಕುಟುಂಬಸ್ಥರು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ನಿರತರಾಗಿದ್ದಾರೆ.
ಪಡುವನ್ನೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಲ್ಕು ಮನೆಗಳಿಗೆ ಹೋಗಲು ಅಂಬಟೆಮೂಲೆ ಮುಖ್ಯ ರಸ್ತೆಯಿಂದ ಸುಮಾರು 100 ಅಡಿ ಉದ್ದಕ್ಕೆ ಪರಮೇಶ್ವರಿ ನಾಯ್ಕ ಎಂಬುವರಿಗೆ ಸೇರಿದ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನಿನಲ್ಲಿ ಅನಾಧಿಕಾಲದಿಂದಲೂ ಇದ್ದ ಆರು ಅಡಿ ಅಗಲದ ರಸ್ತೆಯಿದೆ. ಆದರೆ, ರಸ್ತೆಯನ್ನು ಈಗ ಪರಮೇಶ್ವರಿ ಮತ್ತು ಅವರ ಮಕ್ಕಳು ಸೇರಿ ಬಂದ್ ಮಾಡಿದ್ದಾರೆ.
ಜೊತೆಗೆ, ರಸ್ತೆ ಇರುವ ಪರಿಸರದಲ್ಲಿ ಕುಪ್ಪಿ ಚೂರು ಹಾಕಿ ತೊಂದರೆ ನೀಡಿದ್ದಾರೆ. ಇದರಿಂದಾಗಿ ಆ ಭಾಗದ ನಾಲ್ಕು ಮನೆಗಳಿಗೆ ತೊಂದರೆ ಉಂಟಾಗಿದ್ದು, ಈ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿವರಿಗೂ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ನಮಗೆ ನ್ಯಾಯ ಕೊಡಿ ಎಂದು ನೊಂದ ನಾಲ್ಕು ಮನೆಗಳ ಫಲಾನುಭವಿಗಳು ಪುತ್ತೂರು ತಾಲೂಕು ಆಡಳಿತಸೌಧದ ಎದುರು ಧರಣಿ ನಿರತರಾಗಿದ್ದಾರೆ.
ಪಡುವನ್ನೂರು ಗ್ರಾಮದ ಅಂಬಟೆಮೂಲೆ ನಿವಾಸಿಗಳಾದ ಯುವರಾಜ್, ಸಂಧ್ಯಾ, ಸಂತೋಷ್, ಚಿತ್ರಾ, ಸಂದೀಪ್, ಹೇಮಾವತಿ, ಚಂದ್ರಹಾಸ, ಗಿರೀಶ್ ಧರಣಿಯಲ್ಲಿ ನಿರತರಾಗಿದ್ದರು. ಮರಾಠಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ್ ನಾಯ್ಕ್, ಈಶ್ವರಮಂಗಲದ ಕೊರಗಪ್ಪ, ನ್ಯಾಯವಾದಿ ಪಡ್ಡಂಬೈಲು, ಶೇಷಪ್ಪ ನೆಕ್ಕಿಲು ಉಪಸ್ಥಿತರಿದ್ದರು.
ಓದಿ:ಏ.1ರಿಂದಲೇ ಒಂದು ಕೆಜಿ ಅಕ್ಕಿ ಉಚಿತ.. ರಾಜ್ಯ ಸರ್ಕಾರ ಘೋಷಣೆ.. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ