ಮಂಗಳೂರು:ದ.ಕ ಜನಪರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಹಿಂಪಡೆಯಬೇಕೆಂದು ಒತ್ತಾಯಿಸಿ ಸಿಪಿಐ, ಸಿಪಿಎಂ ಹಾಗೂ ಜಾತ್ಯಾತೀತ ಜನತಾದಳ ಜಂಟಿಯಾಗಿ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಎರಡು ವರ್ಷಗಳ ಕಾಲ ದ.ಕ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಬಡವ, ಶ್ರೀಮಂತ ಯಾರೇ ಅವರ ಕಚೇರಿಗೆ ಹೋದರೂ ಯಾವುದೇ ತಾರತಮ್ಯವಿಲ್ಲದೆ ಸಮಾನತೆಯಿಂದ ಕಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಜೊತೆಗೆ ಭ್ರಷ್ಟಾಚಾರವಿಲ್ಲದ ಜಿಲ್ಲಾಧಿಕಾರಿಯೂ ಆಗಿದ್ದರೆಂದು ಹೇಳಿದರು.
ಸಸಿಕಾಂತ್ ಸೆಂಥಿಲ್ ರಾಜೀನಾಮೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ಇತ್ತೀಚೆಗೆ ದ.ಕ ಜಿಲ್ಲೆಯಾದ್ಯಂತ ಪ್ರವಾಹ ಬಂದಾಗ ಇಡೀ ಬೆಳ್ತಂಗಡಿ ಅಕ್ಷರಶಃ ನಲುಗಿತ್ತು. ಈ ಸಂದರ್ಭ ಅವರು ಸ್ವತಃ ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ಅಲ್ಲದೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಮಾನವಾಗಿ ಬೆರೆತು ಸಮಸ್ಯೆಗಳ ಪರಿಹಾರಕ್ಕೆ ಕೈ ಜೋಡಿಸುತ್ತಿದ್ದರು. ಅಂತವರು ಇಂದು ರಾಜೀನಾಮೆ ನೀಡಿದ್ದಾರೆಂದರೆ ಆಶ್ಚರ್ಯಕರವಾಗುತ್ತಿದೆ ಎಂದರು.
ಸೆಪ್ಟೆಂಬರ್ 2ರಂದು ಅವರು ನನ್ನ ಮನೆಯ ಗಣೇಶ ಪ್ರತಿಷ್ಠಾಪನೆಗೆ ಬಂದಿದ್ದು, ರಾಜೀನಾಮೆಯ ಬಗ್ಗೆ ಯಾವುದೇ ಸುಳಿವನ್ನು ಕೊಟ್ಟಿರಲಿಲ್ಲ. ಆದರೆ ಅಲ್ಲಿಂದ ಬೆಂಗಳೂರಿಗೆ ಹೋಗಿ ರಾಜೀನಾಮೆ ನೀಡಿದ್ದಾರೆಂದರೆ ಇದರ ಹಿಂದೆ ಯಾವುದೋ ಕಾಣದ ಕೈ ಕೆಲಸ ಮಾಡಿದೆ. ಇದಕ್ಕೆ ಕಾರಣ ತಿಳಿಯಬೇಕು. ಆದ್ದರಿಂದ ಸರ್ಕಾರ ಅವರ ರಾಜೀನಾಮೆಯನ್ನು ತಕ್ಷಣ ಹಿಂಪಡೆದು, ಅವರಿಗೆ ಜಿಲ್ಲಾಧಿಕಾರಿ ಅಥವಾ ಬೇರೆ ಯಾವುದಾದರೂ ಹುದ್ದೆಯನ್ನು ನೀಡಿ ನಮ್ಮ ಕರ್ನಾಟಕದಲ್ಲಿ ಇರಿಸಿಕೊಳ್ಳಬೇಕಾಗಿ ಆಗ್ರಹಿಸುತ್ತೇನೆ ಎಂದು ಅಮರನಾಥ ಶೆಟ್ಟಿ ಹೇಳಿದರು.