ಮಂಗಳೂರು: ನಗರದ ಧಕ್ಕೆ ಅಳಿವೆಬಾಗಿಲಿನಲ್ಲಿ ನಡೆದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಹಾಗೂ ಮೀನುಗಾರರ ಸಂಘಗಳು ಮೃತಪಟ್ಟವರ ಮನೆಗೆ ತೆರಳಿ ಸಾಂತ್ವನ ತಿಳಿಸಿಲ್ಲ. ತಕ್ಷಣ ಮೃತಪಟ್ಟವರಿಗೆ ಪರಿಹಾರಧನ ಘೋಷಣೆ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಕಳೆದ ರಾತ್ರಿ 11 ಘಂಟೆಯಿಂದಲೇ ಈ ಪ್ರತಿಭಟನೆ ನಡೆಯುತ್ತಿದ್ದು, ಇಂದೂ ಮುಂದುವರೆದಿದೆ. ಇಂದು ಧಕ್ಕೆಯಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆಗಳನ್ನು ನಡೆಸದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳೂರು ದೋಣಿ ದುರಂತ: ಸಾವನ್ನಪ್ಪಿದವರ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಸಿ ಪ್ರತಿಭಟನೆ ಸ್ಥಳೀಯ ಮ.ನ.ಪಾ ಸದಸ್ಯ ಮುನೀಬ್ ಬೇಂಗ್ರೆ ಮಾತನಾಡಿ, ಸಮುದ್ರದಲ್ಲಿ ನಡೆದ ಬೋಟ್ ದುರಂತದಲ್ಲಿ 6 ಮಂದಿ ನಾಪತ್ತೆಯಾಗಿದ್ದು, ಅದರಲ್ಲಿ ಇಬ್ಬರ ಮೃತದೇಹ ಹಾಗು ಗುರುತು ಪತ್ತೆಯಾಗಿದೆ. ಇಂದು ಮತ್ತೆ ಓರ್ವನ ಮೃತದೇಹ ದೊರೆತಿದ್ದು, ಗುರುತು ಸಿಗದಂತಹ ಪರಿಸ್ಥಿತಿಯಲ್ಲಿದೆ ಎಂದರು.
ಓದಿ: ಮಂಗಳೂರು ಬೋಟ್ ದುರಂತ: ನಾಪತ್ತೆಯಾದ ನಾಲ್ವರ ಪತ್ತೆಗೆ ಮುಂದುವರಿದ ಶೋಧ
ಇಂತಹ ಹಲವಾರು ಪ್ರಕರಣಗಳು ಇಲ್ಲಿ ನಡೆಯುತ್ತಿದ್ದರೂ, ಸರಕಾರ ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ. ಕಾರ್ಯಾಚರಣೆ ನಡೆಸಲು ಸರಿಯಾದ ಸಹಕಾರ ನೀಡುತ್ತಿಲ್ಲ. ಹೀಗಾಗಿ ಸ್ಥಳೀಯರು ಸೇರಿ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಮೀನುಗಾರಿಕೆಗೆ ಸಂಬಂಧಿಸಿದಂತೆ ಒಣಮೀನು, ಹಸಿಮೀನು ಮಾರಾಟಗಾರರ ಸಂಘ, ಬುಲ್ ಟ್ರಾಲ್, ಪರ್ಸಿನ್ ಬೋಟ್ ಮಾಲಕರ ಸಂಘ ಸೇರಿದಂತೆ ಐದಾರು ಮೀನುಗಾರರ ಸಂಘಗಳಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಅದೇ ರೀತಿ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಇಷ್ಟರವರೆಗೆ ಮೃತಪಟ್ಟವರ ಮನೆಗೆ ಭೇಟಿ ನೀಡಿಲ್ಲ. ಇನ್ನೂ ಮೂರು ಮೃತದೇಹಗಳು ಪತ್ತೆಯಾಗಿಲ್ಲ. ಕೋಸ್ಟಲ್ ಗಾರ್ಡ್‌ನವರು ಕಾರ್ಯಾಚರಣೆಗೆ ಸರಿಯಾಗಿ ಸಹಕರಿಸದ ಕಾರಣ, ಸ್ಥಳೀಯ ಮೀನುಗಾರರೇ ನಾಡದೋಣಿಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ದರಿಂದ ಉಳಿದ ಮೀನುಗಾರರು ಪತ್ತೆಯಾಗುವವರೆಗೆ ನಾವು ಈ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಸರಕಾರ ಮೃತಪಟ್ಟವರ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸುವುದಾಗಿ ಅವರು ಹೇಳಿದರು.