ಮಂಗಳೂರು: ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಸಿಐಟಿಯು ಇಂದು ನಗರದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿತು. ಈ ಸಂದರ್ಭ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಸಿಐಟಿಯು ಪ್ರತಿಭಟನೆ - protest against agriculture law
ರೈತ ವಿರೋಧಿ ನೀತಿಯನ್ನು ಖಂಡಿಸಿ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಸಿಐಟಿಯು ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕರ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸುವುದರ ಮೂಲಕ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಅನುಸರಿಸುತ್ತಿದೆ. ಕೇಂದ್ರ ಸರಕಾರ ಜನಪರ, ರೈತಪರ, ಕಾರ್ಮಿಕರ ಪರ ಎಂದು ಹೇಳುತ್ತಲೇ ನಿರಂತರವಾಗಿ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ರೈತರು ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಮಾಡುತ್ತಿದ್ದಾರೆ. 60ಕ್ಕೂ ಮಿಕ್ಕಿ ರೈತರು ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ ಕೇಂದ್ರ ಸರಕಾರ ಯಾವುದಕ್ಕೂ ಬಗ್ಗುತ್ತಿಲ್ಲ. ಇದೀಗ ಈ ಸರಕಾರ ಯಾರ ಪರ ಇದೆ ಎಂದು ಎಲ್ಲರಿಗೂ ತಿಳಿಯುವಂತಾಗಿದೆ ಎಂದು ಹೇಳಿದರು.
ಎಲ್ಲಾ ಕೃಷಿ ಭೂಮಿಗಳು ಉಳ್ಳವರ ಪಾಲಾಗುತ್ತಿವೆ. ಅದಲ್ಲದೆ ರೈತರ ಉತ್ಪಾದನೆಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದು, ಸಂಪೂರ್ಣ ರೈತರ ಬದುಕು ನಾಶ ಮಾಡುವಂಥ ಕೃಷಿ ನೀತಿಗಳನ್ನು ಕೇಂದ್ರ ಸರಕಾರ ಜಾರಿಗೊಳಿಸುತ್ತಿದೆ. ದೇಶದ ರೈತರು ಇದರ ವಿರುದ್ಧ ಪ್ರಬಲವಾದ ಹೋರಾಟವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಸಿಐಟಿಯು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.