ಉಳ್ಳಾಲ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯ್ತು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಉಳ್ಳಾಲ ವಲಯ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ನೇತೃತ್ವದಲ್ಲಿ ಇಂದು ಕುತ್ತಾರ್ ಜಂಕ್ಷನ್ನಲ್ಲಿ ಪ್ರತಿಭಟನೆ ಮಾಡಲಾಯ್ತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಏರಿಸುತ್ತಲೇ ಇದೆ.
ಭಾರತದ ಮೂಲಕ ತೈಲ ತರಿಸಿಕೊಳ್ಳುತ್ತಿರುವ ಶ್ರೀಲಂಕಾ, ನೇಪಾಳದಲ್ಲಿ ಅಲ್ಲಿನ ಸರ್ಕಾರ ಕಡಿಮೆ ಬೆಲೆಗೆ ಗ್ರಾಹಕರಿಗೆ ತೈಲ ಪೂರೈಸುತ್ತಿದೆ. ಆದರೆ, ಇಲ್ಲಿ ಸರ್ಕಾರ ತೈಲ ಬೆಲೆ ಏರಿಸಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿ ಕೊಡುತ್ತಿದೆ ಎಂದು ಆರೋಪಿಸಿದ್ರು.
ಪ್ರತಿಭಟನಾಕಾರನ್ನುದ್ದೇಶಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿರೋಡ್, ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ವಿಲಾಸಿನಿ ತೊಕ್ಕೊಟ್ಟು ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಜೀವನ್ ರಾಜ್ ಕುತ್ತಾರ್, ರಝಾಕ್ ಮೊಂಟೆಪದವು, ರಝಾಕ್ ಮುಡಿಪು, ನಿತಿನ್ ಕುತ್ತಾರ್, ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ್ ಕುತ್ತಾರ್, ಕಾರ್ಯದರ್ಶಿ ಚಂದ್ರಹಾಸ ಪಿಲಾರ್, ರೈತ ಸಂಘದ ಸಂಜೀವ ಪಿಲಾರ್, ಗ್ರಾಪಂ ಸದಸ್ಯ ಮಹಾಬಲ ದೆಪ್ಪಲಿಮಾರ್, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ ಉಪಸ್ಥಿತರಿದ್ದರು.