ಮಂಗಳೂರು :ಇನ್ನು ಮುಂದೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಆನ್ಲೈನ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿ ಕುರಿತಂತೆ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿರುವುದು.. ನಗರದ ಮನಪಾ ಕಚೇರಿಯಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಅವರೊಂದಿಗೆ ಆನ್ಲೈನ್ ವ್ಯವಸ್ಥೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿ ಮಾಡಲು ವೆಬ್ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಲಾಗಿದೆ. ನಾಳೆಯಿಂದ ಈ ಆನ್ಲೈನ್ ವ್ಯವಸ್ಥೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.
ಈ ವೆಬ್ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ತಾವು ಇರುವ ಸ್ಥಳದಲ್ಲಿದ್ದುಕೊಂಡೇ ತಮ್ಮ ಆಸ್ತಿ ತೆರಿಗೆಯ ಮೊತ್ತವನ್ನು ಪಾವತಿಸಬಹುದು. ಆಸ್ತಿ ತೆರಿಗೆ ಪಾವತಿದಾರರು ತಮ್ಮ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿ ಮಾಡುವಾಗ ಕೆಳಕಂಡ ಸೂಕ್ತ ದಾಖಲೆಗಳನ್ನು ಹೊಂದಿರಬೇಕು.
ಮೊದಲು www.mccpropertytax.in ಲಿಂಕ್ ಮೂಲಕ ನಿಮ್ಮ 10 ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ಅದಕ್ಕೆ ಬರುವ ಒಟಿಪಿಯನ್ನು ದಾಖಲಿಸಬೇಕು. ಬಳಿಕ ತಮ್ಮ ಆಸ್ತಿ ಭೂಪರಿವರ್ತನೆ ಆಗಿದೆಯೇ ಎಂದು ಖಚಿತಪಡಿಸಬೇಕು. ಭೂ ಪರಿವರ್ತನೆ ಆದಲ್ಲಿ ರಸ್ತೆ ವಿಸ್ತೀರ್ಣಕ್ಕೆ ಮಾಡಿರುವ ದಾನ ಪತ್ರದ ಬಗ್ಗೆ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಬೇಕು.
ಬಳಿಕ ಕಟ್ಟಡ ಸಂಖ್ಯೆ, ಖಾತಾ ಸಂಖ್ಯೆ, ಪ್ರಾಪರ್ಟಿ ಐಡಿ, ಆಸ್ತಿದಾರರ ವಿಳಾಸಗಳು ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ ಅಗತ್ಯ ಇರುವ ಮಾಹಿತಿ ಭರ್ತಿ ಮಾಡಬೇಕು. ಆಸ್ತಿಯಲ್ಲಿ ಬಾಡಿಗೆದಾರಗಿದ್ದಲ್ಲಿ ಅವರ ಹೆಸರು ಇತರ ವಿವರಗಳನ್ನು ದಾಖಲಿಸಬೇಕು. ಆಸ್ತಿ ಇರುವ ರಸ್ತೆಯನ್ನು ಸರಿಯಾಗಿ ಆಯ್ಕೆ ಮಾಡಬೇಕು.
ಬಳಿಕ ಕೇಳಿರುವ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಆನ್ಲೈನ್ ಮೂಲಕ ಪಾವತಿ ಮಾಡಬಹುದು. ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಗೂಗಲ್ ಪೇ, ಫೋನ್ ಪೇ, ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಪಾವತಿ ಮಾಡಬಹುದು. ಅಲ್ಲದೇ, ಆಫ್ಲೈನ್ ಮೂಲಕ ಪಾವತಿ ಮಾಡಲು ಅವಕಾಶವಿದೆ. ಯಾವುದೇ ಬ್ಯಾಂಕ್ನಿಂದ ಪಾವತಿ ಮಾಡಬಹುದು ಎಂದು ಹೇಳಿದರು.
ಓದಿ:'MES' ಸಂಘಟನೆ ಮೂಲೆ ಗುಂಪಾಗಿದ್ದು, ಮಹಾರಾಷ್ಟ್ರದಲ್ಲಿಯೂ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ