ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರೆ ನಡೆಯುತ್ತಿದ್ದು, ಸಾವಿರಾರು ಭಕ್ತರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಗಡ ನೊಂದಾಯಿಸಿರುವ ಭಕ್ತಾದಿಗಳನ್ನು ಹೊರತುಪಡಿಸಿ ಡಿಸೆಂಬರ್ 17 ರಿಂದ ನಾಲ್ಕು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ರಥಬೀದಿಗೆ ಭಕ್ತರ ಪ್ರವೇಶಕ್ಕೆ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಥೋತ್ಸವ ಸೇವೆಗಳಿಗೆ ಮುಂಗಡ ನೋಂದಾಯಿಸಿರುವ ಭಕ್ತಾದಿಗಳನ್ನು ಹೊರತುಪಡಿಸಿ ಈ ಆದೇಶ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಚೌತಿ, ಪಂಚಮಿ ಹಾಗೂ ಷಷ್ಠಿ ರಥೋತ್ಸವಗಳನ್ನು ಒಳಗೊಂಡಂತೆ ದೇವಾಲಯಕ್ಕೆ ಹಾಗೂ ರಥಬೀದಿಗೆ ಡಿಸೆಂಬರ್ 17 ರಿಂದ 20 ವರೆಗೆ ಎಲ್ಲ ಅಂತಾರಾಜ್ಯ, ಅಂತರ್ ಜಿಲ್ಲಾ ಪ್ರಯಾಣಿಕರು ಮತ್ತು ಭಕ್ತಾದಿಗಳಿಗೆ ಆಗಮನವನ್ನು ನಿಷೇಧಿಸಲಾಗಿದೆ. ಈ ಆದೇಶ ಪಾಲಿಸದಿದ್ದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 5(3), 6(1) (2) ರನ್ವಯ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.